ಶಿಮ್ಕೆಂಟ್ (ಕಜಕಸ್ತಾನ): ಭಾರತದ ಅನಂತಜೀತ್ ಸಿಂಗ್ ನರೂಕ ಅವರು ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನ ಗೆದ್ದುಕೊಂಡರು. ಬುಧವಾರ ನಡೆದ ಪುರುಷರ ಸ್ಕೀಟ್ ಸ್ಪರ್ಧೆಯ ಫೈನಲ್‌ನಲ್ಲಿ ಅವರು ಕುವೈತ್‌ನ ಮನ್ಸೂರ್ ಅಲ್ ರಶೀದಿ ಅವರನ್ನು ಸೋಲಿಸಿದರು.
ಬೆಳಿಗ್ಗೆ, ಭಾರತದ ಸೌರಭ್ ಚೌಧರಿ ಮತ್ತು ಉದಯೋನ್ಮುಖ ಶೂಟರ್ ಸುರುಚಿ ಇಂದರ್ ಸಿಂಗ್ ಅವರನ್ನೊಳಗೊಂಡ ತಂಡ 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಚೀನಾ ತೈಪೆಯ ಎದುರಾಳಿಗಳನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತ್ತು.
27 ವರ್ಷ ವಯಸ್ಸಿನ ನರೂಕ 57–56 ರಿಂದ ಏಷ್ಯನ್ ಗೇಮ್ಸ್ ಚಾಂಪಿಯನ್ ಅಲ್ ರಶೀದಿ ಅವರನ್ನು ಸೋಲಿಸಿ ಚಾಂಪಿಯನ್ ಆದರು. ಕಂಚಿನ ಪದಕ ಕತಾರ್‌ನ ಅಲ್ ಇಶಾಖ್ ಅಲಿ ಅಹ್ಮದ್ ಪಾಲಾಯಿತು.
2023ರ ಚಾಂಪಿಯನ್‌ಷಿಪ್‌ನಲ್ಲಿ ತಂಡ ವಿಭಾಗದಲ್ಲಿ ಮತ್ತು ಮಿಶ್ರ ವಿಭಾಗದಲ್ಲಿ ಚಿನ್ನ ಗೆದಿದ್ದ ನರೂಕಾ ಸ್ಕೀಟ್ ಸ್ಪರ್ಧೆಯ ಕ್ವಾಲಿಫೈಯಿಂಗ್ ಸುತ್ತಿನ ಬಳಿಕ 119ರ ಸ್ಕೋರ್‌ನೊಡನೆ ಎರಡನೇ ಸ್ಥಾನದಲ್ಲಿದ್ದರು. ಕುವೈತ್‌ನ ಅಬ್ದುಲಜೀಜ್ ಅಲ್ಸಾದ್ (120) ಮೊದಲಿಗರಾಗಿದ್ದರು. ಅಲ್ ರಶೀದಿ (119) ಮೂರನೇ ಸ್ಥಾನದಲ್ಲಿದ್ದರು.
ನರೂಕಾ ಅವರಿಗೆ ಏಷ್ಯನ್ ಚಾಂಪಿಯನ್‌ಷಿಪ್‌ಗಳಲ್ಲಿ ಇದು ಒಟ್ಟಾರೆ ಐದನೇ ಪದಕ.
ಸೌರಭ್ ಮತ್ತು ಸುರುಚಿ ಜೋಡಿ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಐದನೇ ಸ್ಥಾನ ಪಡೆದು ಪದಕ ಸುತ್ತಿಗೆ ಅರ್ಹತೆ ಪಡೆದಿತ್ತು.
ಜೂನಿಯರ್ ವಿಭಾಗದಲ್ಲಿ ಚಿನ್ನ:
ವಂಶಿಕಾ ಚೌಧರಿ ಮತ್ತು ಗ್ಯಾವಿನ್ ಅಂಥೋನಿ ಜೋಡಿ, ಜೂನಿಯರ್ ವಿಭಾಗದ 10 ಮೀ. ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಇವರಿಬ್ಬರು ಫೈನಲ್‌ನಲ್ಲಿ ಕೊರಿಯಾದ ಕಿಮ್ ಯೆಜಿನ್– ಕಿಮ್ ದೂಯಿಯಾನ್ ಜೋಡಿಯನ್ನು 16–14ರಿಂದ ಸೋಲಿಸಿದರು.
ಕ್ವಾಲಿಫಿಕೇಷನ್ ಸುತ್ತಿನಲ್ಲಿ ಭಾರತದ ಸ್ಪರ್ಧಿಗಳು ಒಟ್ಟು 578 ಸ್ಕೋರ್‌ನೊಡನೆ ಎರಡನೆ ಸ್ಥಾನ ಗಳಿಸಿದ್ದರು. ವಂಶೀಕಾ 282 ಮತ್ತು ಗ್ಯಾವಿನ್ 296 ಅಂಕ ಕಲೆಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.