ADVERTISEMENT

ಶೂಟಿಂಗ್: ಅನೀಶ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 16:02 IST
Last Updated 27 ಫೆಬ್ರುವರಿ 2024, 16:02 IST
ಅನೀಶ್ ಭನ್ವಾಲಾ
ಅನೀಶ್ ಭನ್ವಾಲಾ   

ಭೋಪಾಲ್‌ (ಪಿಟಿಐ): ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಭಾರತದ ಅನೀಶ್ ಭಾನವಾಲಾ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಆಯ್ಕೆ ಟ್ರಯಲ್ಸ್‌ನ ಪುರುಷರ 25 ಮೀ ರ‍್ಯಾಪಿಡ್‌ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರು.

ಟಿ4 ಫೈನಲ್‌ನಲ್ಲಿ ಅನೀಶ್ 40ರಲ್ಲಿ 35 ಹಿಟ್‌ಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಸೇನೆಯ ಗುರ್ಮೀತ್‌ (31 ಹಿಟ್‌) ಎರಡನೇ ಸ್ಥಾನ ಗಳಿಸಿದರು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮತ್ತೊಬ್ಬ ಸ್ಪರ್ಧಿ ವಿಜಯವೀರ್ ಸಿಧು (22 ಹಿಟ್‌) ಮೂರನೇ ಸ್ಥಾನ ಪಡೆದರು. ಭಾನುವಾರ ನಡೆದಿದ್ದ ಟಿ3 ಸ್ಪರ್ಧೆಯಲ್ಲೂ ಈ ಮೂವರು ಇದೇ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

ಪ್ಯಾರಿಸ್ ಕೂಟಕ್ಕೆ ಕೋಟಾ ಹೊಂದಿರುವ ಅರ್ಜುನ್‌ ಬಬುತಾ ಅವರು ಪುರುಷರ 10 ಮೀಟರ್ ಏರ್ ರೈಫಲ್ ಟಿ3 ಸ್ಪರ್ಧೆಯ ಫೈನಲ್‌ನಲ್ಲಿ 253.7 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರು. ಈ ಅಂಕವು ಕಳೆದ ತಿಂಗಳು ಕೈರೋದಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಭಾರತದ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಫೈನಲ್‌ನಲ್ಲಿ ಗಳಿಸಿದ ವಿಶ್ವ ದಾಖಲೆಯ ಸ್ಕೋರ್‌ಗೆ ಸಮನಾಗಿದೆ. ನೌಕಾಪಡೆಯ ಕಿರಣ್ ಅಂಕುಶ್ ಜಾಧವ್ ಮತ್ತು ತಮಿಳುನಾಡಿನ ಕಾರ್ತಿಕ್ ಸಾಬ್ರಿ ರಾಜ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. 

ADVERTISEMENT

ದಿನದ ಮೂರನೇ ಪಂದ್ಯದಲ್ಲಿ ರೈಲ್ವೇಸ್‌ನ ಆಯುಷಿ ಪೋಡರ್ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್‌ ಸ್ಪರ್ಧೆಯಲ್ಲಿ 459.7 ಸ್ಕೋರ್‌ನೊಂದಿಗೆ ಪ್ರಥಮ ಸ್ಥಾನ ಗಳಿಸಿದರು. ಕೇರಳದ ವಿದರ್ಶಾ ಕೆ.ವಿನೋದ್ ದ್ವಿತೀಯ ಹಾಗೂ ಗುಜರಾತ್‌ನ ಹೀನಾ ಗೊಹೆ ತೃತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.