ADVERTISEMENT

ವಿಶ್ವ ಯೂನಿವರ್ಸಿಟಿ ಗೇಮ್ಸ್‌: ಸ್ಟೀಪಲ್‌ಚೇಸರ್‌ ಅಂಕಿತಾ ಧ್ಯಾನಿಗೆ ಬೆಳ್ಳಿ

ಪಿಟಿಐ
Published 27 ಜುಲೈ 2025, 14:43 IST
Last Updated 27 ಜುಲೈ 2025, 14:43 IST
ಸ್ಟೀಪಲ್‌ಚೇಸರ್‌ ಅಂಕಿತಾ ಧ್ಯಾನಿ
ಸ್ಟೀಪಲ್‌ಚೇಸರ್‌ ಅಂಕಿತಾ ಧ್ಯಾನಿ   

ಎಸ್ಸೆನ್ (ಜರ್ಮನಿ): ಭಾರತದ ಸ್ಟೀಪಲ್‌ಚೇಸರ್‌ ಅಂಕಿತಾ ಧ್ಯಾನಿ ಅವರು ಇಲ್ಲಿ ಭಾನುವಾರ ಮುಕ್ತಾಯಗೊಂಡ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 3000 ಮೀಟರ್ ಓಟದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಜಯಿಸಿದರು. ಪುರುಷರ 4x100 ಮೀಟರ್ ರಿಲೆ ತಂಡವು ಕಂಚಿನ ಪದಕ ಗೆದ್ದುಕೊಂಡಿತು. 

ಎರಡು ಚಿನ್ನ, ಐದು ಬೆಳ್ಳಿ ಮತ್ತು ಐದು ಕಂಚಿನ ಪದಕದೊಂದಿಗೆ ಭಾರತದ ಅಭಿಯಾನಕ್ಕೆ ತೆರೆಬಿತ್ತು. 12 ಪದಕ ಗೆದ್ದ ಭಾರತ, ಪದಕ ಪಟ್ಟಿಯಲ್ಲಿ 20ನೇ ಸ್ಥಾನ ಗಳಿಸಿತು. 79 ಪದಕ ಗೆದ್ದ ಜಪಾನ್‌ (34 ಚಿನ್ನ, 21 ಬೆಳ್ಳಿ, 24 ಕಂಚು) ಮತ್ತು 74 ಪದಕ ಜಯಿಸಿದ ಚೀನಾ (30 ಚಿನ್ನ, 27 ಬೆಳ್ಳಿ, 17 ಕಂಚು) ಕ್ರಮವಾಗಿ ಮೊದಲೆರಡು ಸ್ಥಾನ ಪಡೆಯಿತು.

ಟ್ರ್ಯಾಕ್‌ ವಿಭಾಗದಲ್ಲಿ ಭಾರತದ ಹಲವು ಸ್ಪರ್ಧಿಗಳು ಅಂತಿಮ ದಿನ ಕಣದಲ್ಲಿದ್ದರೂ ಕೇವಲ ಎರಡು ಪದಕ ಗೆಲ್ಲಲು ಸಾಧ್ಯವಾಯಿತು. 23 ವರ್ಷದ ಅಂಕಿತಾ 9 ನಿಮಿಷ 32.99 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅವರು ತಮ್ಮ ಹಿಂದಿನ ಶ್ರೇಷ್ಠ ಸಮಯಕ್ಕಿಂತ ಏಳು ಸೆಕೆಂಡ್‌ ಬೇಗನೆ ದಡ ಸೇರಿದರು. ಫಿನ್‌ಲ್ಯಾಂಡ್‌ನ ಇಲೋನಾ ಮಾರಿಯಾ ಮೊನೊನೆನ್ (9:31.86) ಚಿನ್ನದ ಪದಕ ಗೆದ್ದುಕೊಂಡರು.

ADVERTISEMENT

ಅಂಕಿತಾ ಅವರು ಶುಕ್ರವಾರ ನಡೆದ ಹೀಟ್ ಒಂದರಲ್ಲಿ 9ನಿ. 54.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿ, ಅಗ್ರಸ್ಥಾನದೊಂದಿಗೆ ಫೈನಲ್‌ ತಲುಪಿದ್ದರು. ಫೈನಲ್‌ ಸ್ಪರ್ಧೆಯಲ್ಲಿ ಆರಂಭದಿಂದಲೇ ಅಗ್ರ ಐದರಲ್ಲೇ ಉಳಿದಿದ್ದ ಭಾರತದ ಅಥ್ಲೀಟ್‌, ಕೊನೆಯ ಹಂತದಲ್ಲಿ ವೇಗವನ್ನು ಹೆಚ್ಚಿಸಿಕೊಂಡು, ಕೇವಲ 0.13 ಸೆಕೆಂಡ್‌ಗಳಿಂದ ಚಿನ್ನ ತಪ್ಪಿಸಿಕೊಂಡರು. 

ಲಾಲು ಪ್ರಸಾದ್ ಭೋಯ್, ಅನಿಮೇಶ್ ಕುಜೂರ್, ಮಣಿಕಂಠ ಹೋಬಳಿಧರ ಮತ್ತು ಮೃತ್ಯುಂ ಜಯರಾಮ್ ಅವರನ್ನೊಳಗೊಂಡ ಪುರುಷರ ರಿಲೆ ತಂಡವು 38.89 ಸೆಕೆಂಡುಗಳಲ್ಲಿ ಗುರಿ ತಲುಪಿತು. ದಕ್ಷಿಣ ಕೊರಿಯಾ ತಂಡದ (38.50 ಸೆ.) ಚಿನ್ನ ಗೆದ್ದರೆ, ದಕ್ಷಿಣ ಆಫ್ರಿಕಾ (38.80 ಸೆ) ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.

ಭಾರತದ ಮಹಿಳಾ 4x400 ಮೀಟರ್‌ ರಿಲೆ ತಂಡವು ಋತುವಿನ ಅತ್ಯುತ್ತಮ ಸಮಯ 3 ನಿಮಿಷ 35.08 ಸೆಕೆಂಡ್‌ಗಳಲ್ಲಿ ತಲುಪಿದರೂ ಪದಕ ಗೆಲ್ಲಲು ಅದು ಸಾಕಾಗಲಿಲ್ಲ. ಅನಖಾ ಬಿಜುಕುಮಾರ್, ದೇವಯಾನಿಬಾ ಝಲಾ, ರಶ್ದೀಪ್ ಕೌರ್ ಮತ್ತು ರೂಪಲ್ ಅವರನ್ನು ಒಳಗೊಂಡ ತಂಡ ಐದನೇ ಸ್ಥಾನ ಗಳಿಸಿತು. ಜರ್ಮನಿ (3:29.68) ಚಿನ್ನ ಗೆದ್ದಿತು. ಇದೇ ವಿಭಾಗದ ಪುರುಷರ ತಂಡವೂ ಐದನೇ ಸ್ಥಾನ ಗಳಿಸಿತು. ವಿಶಾಲ್ ಕೆ., ಅಶ್ವಿನ್ ಲಕ್ಷ್ಮಣನ್, ಜೆರೋಮ್ ಜಯಶೀಲನ್ ಮತ್ತು ಬಾಲಕೃಷ್ಣ ಅವರ ತಂಡವು 3 ನಿಮಿಷ 06.5 ಸೆಕೆಂಡ್‌ಗಳಲ್ಲಿ ದಡ ಸೇರಿತು. ಪೋಲೆಂಡ್‌ ತಂಡ ಸ್ವರ್ಣ ಜಯಿಸಿತು.

ತ್ರಿವಳಿ ಮಹಿಳೆಯರ 20 ಕಿ.ಮೀ. ರೇಸ್‌ವಾಕ್‌ನಲ್ಲಿ ಮುನಿತಾ ಪ್ರಜಾಪತಿ, ಮಾನ್ಸಿ ನೇಗಿ ಮತ್ತು ಸೇಜಲ್ ಸಿಂಗ್ ಕಂಚಿನ ಪದಕ ಗೆದ್ದರು. 

ಅರ್ಹತಾ ಸುತ್ತಿನಲ್ಲಿ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸಿಕೊಂಡಿದ್ದ ದೇವ್ ಕುಮಾರ್ ಮೀನಾ (5.35 ಮೀ) ಪುರುಷರ ಪೋಲ್‌ವಾಲ್ಟ್‌ ಫೈನಲ್‌ನಲ್ಲಿ ಐದನೇ ಸ್ಥಾನ ಗಳಿಸಿದರು. ನಾರ್ವೆಯ ಸಿಮೆನ್ ಗುಟ್ಟೋರ್ಮ್ಸೆನ್ (5.75 ಮೀ) ಚಿನ್ನದ ಪದಕ ಗೆದ್ದರು.

ಸ್ಟೀಪಲ್‌ಚೇಸರ್‌ ಅಂಕಿತಾ ಧ್ಯಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.