ಆಬರ್ನ್‌ಡೇಲ್ (ಅಮೆರಿಕ): ಭಾರತದ ಬಿಲ್ಗಾರರು ಇಲ್ಲಿ ನಡೆದ ಆರ್ಚರಿ ವಿಶ್ವಕಪ್ ಸ್ಟೇಜ್ 1ರಲ್ಲಿ ನಾಲ್ಕು ಪದಕಗಳೊಂದಿಗೆ ಅಭಿಯಾನವನ್ನು ಮುಗಿಸಿದರು.
ಸ್ಪರ್ಧೆಯ ಕೊನೆಯ ದಿನವಾದ ಭಾನುವಾರ ಭಾರತ ಪುರುಷರ ರಿಕರ್ವ್ ತಂಡವು ಬೆಳ್ಳಿ ಪದಕ ಗೆದ್ದರೆ, ಉದಯೋನ್ಮುಖ ಬಿಲ್ಗಾರ ಧೀರಜ್ ಬೊಮ್ಮದೇವರ ಅವರು ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ತರುಣದೀಪ್ ರೈ, ಧೀರಜ್ ಮತ್ತು ಅತನು ದಾಸ್ ಅವರನ್ನು ಒಳಗೊಂಡ ತಂಡವು ಫೈನಲ್ ಹಣಾಹಣಿಯಲ್ಲಿ 1–5ರಿಂದ ಚೀನಾದ ತಂಡಕ್ಕೆ ಮಣಿದು ಬೆಳ್ಳಿ ಪದಕ ಜಯಿಸಿತು.
ಕಂಚಿನ ಪದಕದ ಸ್ಪರ್ಧೆಯಲ್ಲಿ ಆರಂಭಿಕ ಹಿನ್ನಡೆಯಿಂದ (2–4) ಚೇತರಿಸಿಕೊಂಡ 23 ವರ್ಷ ವಯಸ್ಸಿನ ಧೀರಜ್ 6–4ರಿಂದ ಸ್ಪೇನ್‌ನ ಆಂಡ್ರೆಸ್ ಟೆಮಿನೊ ಮೆಡಿಯೆಲ್ ಅವರನ್ನು ಸೋಲಿಸಿದರು.
ಭಾರತದ ಅಭಿಷೇಕ್ ವರ್ಮಾ ಕೂದಳೆಲೆಯ ಅಂತರದಲ್ಲಿ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದರು.
ಇದಕ್ಕೂ ಮುನ್ನ ಜ್ಯೋತಿ ಸುರೇಖಾ ವೆಣ್ಣಂ ಮತ್ತು ರಿಷಭ್ ಯಾದವ್ ಅವರನ್ನೊಳಗೊಂಡ ಭಾರತದ ಕಾಂಪೌಂಡ್ ಮಿಶ್ರ ಆರ್ಚರಿ ತಂಡ ಚಿನ್ನದ ಸಾಧನೆ ಮಾಡಿತ್ತು. ಪುರುಷರ ಕಾಂಪೌಂಡ್ ತಂಡವು ಕಂಚಿನ ಪದಕ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.