
ಪ್ರಶಸ್ತಿಯೊಂದಿಗೆ ಅರ್ಮಾಂಡ್ ಡುಪ್ಲಾಂಟಿಸ್ –
ಎಎಫ್‌ಪಿ ಚಿತ್ರ
ಮೊನಾಕೊ: ಸ್ವೀಡನ್‌ನ ಪೋಲ್‌ವಾಲ್ಟ್ ತಾರೆ ಅರ್ಮಾಂಡ್ ಡುಪ್ಲಾಂಟಿಸ್ ಹಾಗೂ ಅಮೆರಿಕದ ಸಿಡ್ನಿ ಮೆಕ್‌ಲಾಫ್ಲಿನ್ ಲೆವ್ರೊನ್ ಅವರು ವಿಶ್ವ ಅಥ್ಲೆಟಿಕ್ಸ್ ಕೊಡಮಾಡುವ 2025ನೇ ಸಾಲಿನ ‘ವರ್ಷದ ಅಥ್ಲೀಟ್’ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾನುವಾರ ಮೊನಾಕೊದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ‘ಸೋಲಿಲ್ಲದ ಸರದಾರ’ ಡುಪ್ಲಾಂಟಿಸ್ ಅವರು ಟೋಕಿಯೊದಲ್ಲಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 6.30ಮೀ ಜಿಗಿದು 14ನೇ ಬಾರಿಗೆ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.
26 ವರ್ಷ ವಯಸ್ಸಿನ ಡುಪ್ಲಾಂಟಿಸ್ ಅವರು ಈ ವರ್ಷದಲ್ಲಿ ಪೋಲ್‌ವಾಲ್ಟ್ ಹೊರಾಂಗಣ ಮತ್ತು ಒಳಾಂಗಣ ಸ್ಪರ್ಧೆಗಳಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 16 ಕೂಟಗಳಲ್ಲಿ ಚಿನ್ನ ಜಯಿಸಿದ್ದು, ಅಜೇಯರಾಗಿ ಉಳಿದಿದ್ದಾರೆ.
ವರ್ಷದ ಅಥ್ಲೀಟ್ ಜೊತೆಗೆ ವರ್ಷದ ‘ಶ್ರೇಷ್ಠ ಫೀಲ್ಡ್ ಅಥ್ಲೀಟ್’ ಗೌರವಕ್ಕೂ ಅವರು ಭಾಜನರಾಗಿದ್ದಾರೆ
ಅವರು 2020 ಮತ್ತು 2022ರಲ್ಲಿಯೂ ವರ್ಷದ ಅಥ್ಲೀಟ್ ಗೌರವಕ್ಕೆ ಭಾಜನರಾಗಿದ್ದರು.
ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಅಮೆರಿಕದ ಓಟಗಾರ್ತಿ ಲೆವ್ರೊನ್ ಅವರು ಮಹಿಳಾ ವಿಭಾಗದಲ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ.
26 ವರ್ಷ ವಯಸ್ಸಿನ ಲೆವ್ರೊನ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ 400 ಮೀ. ಓಟ ಹಾಗೂ 400 ಮೀ. ಹರ್ಡಲ್ಸ್ ಸ್ಪರ್ಧೆಗಳೆರಡರಲ್ಲೂ ಚಿನ್ನ ಗೆದ್ದ ಮೊದಲ ಅಥ್ಲೀಟ್ ಆಗಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಸ್ಪರ್ಧಿಸಿದ ಎಲ್ಲ ಸ್ಪರ್ಧೆಗಳಲ್ಲಿಯೂ ಅವರು ಸ್ವರ್ಣ ಜಯಿಸಿದ್ದಾರೆ.
ಲೆವ್ರೊನ್ ಅವರು ಮಹಿಳೆಯರ ವಿಭಾಗದ ‘ಟ್ರಾಕ್ ಅವಾರ್ಡ್’ ಗೌರವಕ್ಕೂ ಭಾಜನರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಕೆನ್ಯಾದ ಇಮಾನ್ಯುಯೆಲ್ ವಾನ್ಯೋನಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.