ADVERTISEMENT

ದೇಶಿ ಕ್ರೀಡೆ: ಛಲದಂಕ ‘ಮಲ್ಲ’ರು

ಪ್ರಮೋದ
Published 9 ಏಪ್ರಿಲ್ 2022, 19:30 IST
Last Updated 9 ಏಪ್ರಿಲ್ 2022, 19:30 IST
ಗದಗ ತಾಲ್ಲೂಕಿನ ನೀಲಗುಂದ ಸಮೀಪದ ‌ಗುದ್ನೇಶ್ವರ ಮಠದ ಶಾಲೆ ಮಕ್ಕಳ ಮಲ್ಲಕಂಬ ಸಾಹಸ
ಗದಗ ತಾಲ್ಲೂಕಿನ ನೀಲಗುಂದ ಸಮೀಪದ ‌ಗುದ್ನೇಶ್ವರ ಮಠದ ಶಾಲೆ ಮಕ್ಕಳ ಮಲ್ಲಕಂಬ ಸಾಹಸ   

ಇವರು ಮಲ್ಲಕಂಬದ ಮಲ್ಲರು. ಸಾಧನೆಯ ಛಲವುಳ್ಳ, ಎಂಥದ್ದೇ ಸಾಧನೆಯಾದರೂ ಮಾಡಬಲ್ಲೆವು ಎನ್ನುವ ಧೈರ್ಯ ತೋರುವ ಮಲ್ಲರು. ಕಂಬದ ಮೇಲೆ ಹಲವಾರು ಸಾಹಸಗಳನ್ನು ಮಾಡುವವರು. ನೆಲದ ಮೇಲೆ ಕಾಲಿಟ್ಟು ಆಕಾಶದತ್ತ ಮುಖ ಮಾಡಿ ನೋಡನೋಡುತ್ತಲೇ 25ರಿಂದ 30 ಅಡಿಗಳಷ್ಟು ಮೇಲಕ್ಕೆ ಹೋಗಿ ದೇಹ ಸಮತೋಲಿತವಾಗಿ ಇರುವಂತೆ ಮಾಡಬಲ್ಲರು.

ಕರ್ನಾಟಕದಲ್ಲಿ ಮಲ್ಲಕಂಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ಅದರಲ್ಲೂ ವಿಶೇಷವಾಗಿ ಬಾಗಲಕೋಟೆ, ಧಾರವಾಡ, ವಿಜಯಪುರ ಹಾಗೂ ಗದಗ ಜಿಲ್ಲೆಗಳಲ್ಲಿ ಮೈ ನವಿರೇಳಿಸುವ ಈ ಸಾಹಸ ಕ್ರೀಡೆಯಲ್ಲಿ ಹೆಚ್ಚಿನ ಕ್ರೀಡಾಪಟುಗಳು ತೊಡಗಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಜಾತ್ರೆ, ಉತ್ಸವ, ಹಬ್ಬಹರಿದಿನಗಳು, ಶಾಲಾ ಮತ್ತು ಕಾಲೇಜುಗಳಲ್ಲಿ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದ್ದ ಮಲ್ಲಕಂಬ ಕೆಲ ವರ್ಷಗಳಿಂದ ವೃತ್ತಿಪರ ಕ್ರೀಡೆಯಾಗಿ ಬದಲಾಗಿದೆ. ದೇಶ, ವಿದೇಶಗಳಲ್ಲಿ ಮಲ್ಲಕಂಬದ ಸಾಹಸಗಳು ಸ್ಪರ್ಧಾತ್ಮಕವಾಗಿ ಪ್ರದರ್ಶಿತವಾಗುತ್ತಿವೆ.

ಗದಗ ಜಿಲ್ಲೆಯ ಬಹುತೇಕ ಕಡೆ ಈ ಕ್ರೀಡೆ ಸಂಸ್ಕೃತಿಯಾಗಿ ಬೆಳೆದುಬಂದಿದೆ. ಇದೇ ಜಿಲ್ಲೆಯ ನೀಲಗುಂದ ಸಮೀಪದ ‌ಗುದ್ನೇಶ್ವರ ಮಠದ ದಿವ್ಯಚೇತನ ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ಕೂಡ ಮಲ್ಲಕಂಬದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಪೋಷಕರ ಪ್ರೋತ್ಸಾಹವೂ ಇದಕ್ಕಿದೆ. ಎಂಟು ವರ್ಷದಿಂದ 18 ವರ್ಷದ ವಯಸ್ಸಿನ ತನಕದ ಮಕ್ಕಳು ಈ ಶಾಲೆಯಲ್ಲಿ ಮಲ್ಲಕಂಬ ತರಬೇತಿ ಪಡೆಯುತ್ತಿದ್ದಾರೆ. ಸ್ಥಿರ ಮಲ್ಲಕಂಬದಲ್ಲಿ ದಶರಂಗಾಸನ, ನಟರಾಜಾಸನ, ಸ್ಟ್ಯಾಂಡಿಂಗ್‍ನಲ್ಲಿ ಹ್ಯಾಂಡ್ ಬ್ಯಾಲೆನ್ಸ್, ಸೂರ್ಯ ನಮಸ್ಕಾರ, ಏಕಪಾದಾಸನ, ರಾಜಾಸನ, ಮಯೂರಾಸನ, ಪದ್ಮಾಸನ, ರೋಪ್ ಮಲ್ಲಕಂಬದಲ್ಲಿ ಕ್ರಿಸ್‍ಕ್ರಾಸ್, ನಿದ್ರಾಸನ, ಪದ್ಮಾಸನ, ಪರ್ವತಾಸನ, ಶವಾಸನ ಹೀಗೆ ಅನೇಕ ಆಸನಗಳನ್ನು ಪ್ರದರ್ಶಿಸುತ್ತಾರೆ.

ADVERTISEMENT

ಈ ಕ್ರೀಡೆಗಾಗಿಯೇ ಮಲ್ಲಕಂಬ ಮಹಾಮಂಡಳಿ ಕೆಲವು ನಿಯಮಗಳನ್ನು ರೂಪಿಸಿದೆ. ಸ್ಥಿರ, ನೇತಾಡುವ ಹಾಗೂ ಹಗ್ಗದ ಮಲ್ಲಕಂಬಗಳು ಜನಜನಿತವಾಗಿವೆ. ದಶರಂಗ, ವೇಲ್, ತಿರುವು ಹಾಗೂ ಯೋಗಾಸನದ ಮಲ್ಲಕಂಬಗಳಲ್ಲಿ ಪಾದರಸದಷ್ಟು ವೇಗ, ಚಾಕಚಕ್ಯತೆ, ದೇಹವನ್ನು ಬಾಗಿಸುವ ಮತ್ತು ಸಮತೋಲನ ಕಾಪಾಡುವ ಕೌಶಲ ಬೇಕಾಗುತ್ತದೆ.

ಮೂರು ವರ್ಷಗಳ ಹಿಂದೆ ಗುದ್ನೇಶ್ವರ ಮಠದ ಶಾಲೆಯಲ್ಲಿ ಮಲ್ಲಕಂಬ ಕಲಿಕೆ ಆರಂಭವಾದಾಗ 15 ಮಕ್ಕಳು ತರಬೇತಿಗೆ ಬಂದಿದ್ದರು. ಈಗ 60ಕ್ಕೂ ಹೆಚ್ಚು ಮಕ್ಕಳು ನಿತ್ಯ ಮೂರ್ನಾಲ್ಕು ತಾಸು ಅಭ್ಯಾಸ ಮಾಡುತ್ತಾರೆ. ಇದುವರೆಗೆ 15 ಜನ ಮಲ್ಲಕಂಬ ಮಾಡುವ ಸಾಹಸಿಗರು ರಾಜ್ಯಮಟ್ಟದಲ್ಲಿ ಹಾಗೂ ಮುಬಾರಕ್‌ ಮುಲ್ಲಾನವರ ಎಂಬ 13 ವರ್ಷದ ಕ್ರೀಡಾಪಟು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮೆರೆದಿದ್ದಾರೆ.

ನಿತ್ಯ ಬೆಳಿಗ್ಗೆ 4.30ಕ್ಕೆ ಏಳುವ ಮಕ್ಕಳು ದೇಹದ ಅಂಗಗಳನ್ನು ಸಡಿಲ ಮಾಡಿಕೊಳ್ಳಲು ಶಾಲಾ ಆವರಣದಲ್ಲಿ ಓಡುತ್ತಾರೆ. ಬಳಿಕ ಜಂಪಿಂಗ್‌ ಹಾಗೂ ಏಕಾಗ್ರತೆಗಾಗಿ ಯೋಗ ಮಾಡಿಸಲಾಗುತ್ತದೆ. ಬೆಳಿಗ್ಗೆ ಎರಡು ತಾಸು ಮತ್ತು ಸಂಜೆ ಎರಡು ತಾಸು ಮಲ್ಲಕಂಬದ ಅಭ್ಯಾಸ ಮಾಡುತ್ತಾರೆ.

ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡದ ವಿನಾಯಕ ಗಾಣಿಗೇರ ಮೂರು ವರ್ಷಗಳಿಂದ ತರಬೇತಿ ನೀಡುತ್ತಿದ್ದು ಸಾಮಾನ್ಯವಾಗಿ ನಡೆಯುವ ಮಲ್ಲಕಂಬಗಳ ಸಾಹಸದ ಜೊತೆಗೆ ನಿರಾಧಾರ, ಬಾಟಲ್‌, ಹ್ಯಾಂಗಿಂಗ್‌ ಮತ್ತು ಬಾಳೆಗೊನೆ ಆಕಾರದ ಮಲ್ಲಕಂಬಗಳ ವಿಧಾನಗಳನ್ನು ಕಲಿಸುತ್ತಿದ್ದಾರೆ. ವರ್ಷಗಳು ಉರುಳಿದಂತೆ ಮಲ್ಲಕಂಬದಲ್ಲಿಯೂ ಹೊಸ ಪ್ರಯೋಗಗಳು ನಡೆಯುತ್ತಿವೆ. ವೃತ್ತಿಪರವಾಗಿ ಈ ಕ್ರೀಡೆ ಬೆಳೆಯುತ್ತಿದೆ. ವಿನಾಯಕ, ಕೋಳಿವಾಡದ ರಾಜು ಶಿವನಗೌಡ ಅವರಿಂದ ಯೋಗ ಹಾಗೂ ಮಲ್ಲಕಂಬದ ಕೌಶಲಗಳನ್ನು ಕಲಿತಿದ್ದು, ದೇಶ- ವಿದೇಶಗಳಲ್ಲಿ ಯೋಗ ಪ್ರದರ್ಶನ ನೀಡಿದ್ದಾರೆ.

ಕಥೆಗಳೇ ಸ್ಫೂರ್ತಿ: ಮಲ್ಲಕಂಬ ಕಲಿಯಲು ಬಯಸುವ ಮಕ್ಕಳಿಗೆ ಸಾಧಕರ ಕಥೆಗಳನ್ನು ಹೇಳಿ ಅವರಲ್ಲಿ ಸ್ಫೂರ್ತಿ ತುಂಬಲಾಗುತ್ತದೆ. ಇದು ಸಾಹಸ ಮತ್ತು ಹೆಚ್ಚು ಶ್ರಮ ಬೇಡುವ ಕ್ರೀಡೆಯಾದ್ದರಿಂದ ಬಹಳಷ್ಟು ಮಕ್ಕಳು ಮಲ್ಲಕಂಬ ಮಾಡುವ ವಿಧಾನಗಳನ್ನು ನೋಡಿಯೇ ಇದರ ಸಹವಾಸವೇ ಬೇಡ ಎಂದು ದೂರಸರಿಯುತ್ತಾರೆ.

ಆದ್ದರಿಂದ ಕೋಚ್‌ ಸಾಧಕರ ಕಥೆಗಳನ್ನು ಹೇಳಿ ಮಕ್ಕಳಲ್ಲಿ ಭರವಸೆ ತುಂಬುತ್ತಿದ್ದಾರೆ. ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಹಿಮಾದಾಸ್‌, ಬ್ಲೇಡ್‌ ರನ್ನರ್‌ ಖ್ಯಾತಿಯ ಆಸ್ಕರ್‌ ಪಿಸ್ಟೋರಿಯಸ್‌, ರೈಲಿನಲ್ಲಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಒಂದು ಕಾಲು ಕಳೆದುಕೊಂಡರೂ ಮೌಂಟ್‌ ಎವರೆಸ್ಟ್‌ ಏರಿದ ಅರುಣಿಮಾ ಸಿನ್ಹಾ, ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಹೀಗೆ ಸವಾಲುಗಳ ನಡುವೆ ಸಾಧನೆ ಮಾಡಿದವರ ಕಥೆಗಳು ಮಕ್ಕಳಿಗೆ ಪ್ರೇರಣೆಯಾಗುತ್ತಿವೆ.

‘ಮಲ್ಲಕಂಬ ಕಲಿಯುವುದಕ್ಕಿಂತ ಹೆಚ್ಚಾಗಿ, ಕಲಿಯಲು ಮಕ್ಕಳನ್ನು ಮಾನಸಿಕವಾಗಿ ಗಟ್ಟಿ ಮಾಡುವುದೇ ದೊಡ್ಡ ಕೆಲಸ. ಮೊದಲು ಅವರಲ್ಲಿ ಸಾಹಸ ಮನೋಭಾವ ಬೆಳೆಸಲಾಗುತ್ತದೆ. ದೇಹ ಗಟ್ಟಿಮುಟ್ಟಾಗಿಸಲು ಕರ್ಜೂರ, ಹಸಿ ಕಾಳುಗಳು, ಹಾಲು ಹಾಗೂ ಮೊಸರು ಕೊಡಲಾಗುತ್ತದೆ. ನಿತ್ಯ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಹೇಳಿಕೊಡಲಾಗುತ್ತಿದೆ’ ಎನ್ನುತ್ತಾರೆ ಕೋಚ್‌ ವಿನಾಯಕ.

‘ಉಚಿತ ತರಬೇತಿಗೆ ವ್ಯವಸ್ಥೆ’

ಮಕ್ಕಳಿಗೆ ಮಠದಲ್ಲಿ ವಸತಿ ಸೌಲಭ್ಯ ನೀಡಿ, ಮಲ್ಲಕಂಬ ತರಬೇತಿಗೆ ಉಚಿತವಾಗಿ ವ್ಯವಸ್ಥೆ ಮಾಡಿಕೊಟ್ಟ ‌ಗುದ್ನೇಶ್ವರ ಮಠದ ಪ್ರಭುಲಿಂಗ ಸ್ವಾಮೀಜಿ ಮಕ್ಕಳ ಮಲ್ಲಕಂಬ ಸಾಹಸಕ್ಕೆ ಪ್ರೇರಣೆಯಾಗಿ ನಿಂತಿದ್ದಾರೆ. ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿದ್ದಾರೆ.

‘ನೆಲದ ಮೇಲೆ ಕಂಬ ಇಟ್ಟು ಮಲ್ಲಕಂಬದ ಸಾಹಸ ಮಾಡುವುದು ಈಗ ಸಾಮಾನ್ಯವಾಗಿದೆ. ಇದೇ ಕ್ರೀಡೆಯಲ್ಲಿ ಹೊಸತನಗಳನ್ನು ನಾವು ಅಳವಡಿಸಿಕೊಂಡಿದ್ದೇವೆ. ಯಾರ ನೆರವೂ ಇಲ್ಲದೆ ಸಾಹಸ ಮಾಡುವುದನ್ನು ಕಲಿಸುತ್ತಿದ್ದೇವೆ’ ಎಂದು ಪ್ರಭುಲಿಂಗ ಸ್ವಾಮೀಜಿ ಹೇಳುತ್ತಾರೆ.

‘ಮಲ್ಲಕಂಬ ಕ್ರೀಡೆಯಷ್ಟೇ ಅಲ್ಲ; ಜೀವನ ಪಾಠವೂ ಹೌದು. ಈ ಕ್ರೀಡೆಯಲ್ಲಿ ಸರಾಗವಾಗಿ ಆಸನಗಳನ್ನು ಮಾಡಲು ದೇಹ ಹೇಗೆ ಸಮತೋಲಿತವಾಗಿ ಇರಬೇಕೋ, ಅದೇ ರೀತಿ ಜೀವನ ಸುಂದರವಾಗಿ ಇರಲು ಎಲ್ಲವೂ ಸಮತೋಲಿತವಾಗಿ ಇರಬೇಕು ಎನ್ನುವ ಸಂದೇಶವನ್ನು ಕ್ರೀಡೆಯ ಮೂಲಕ ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.