ADVERTISEMENT

ಮಣಿಪುರದಲ್ಲಿ ಅಭ್ಯಾಸ ಆರಂಭಿಸಿದ ಮೇರಿ ಕೋಮ್‌

ಪಿಟಿಐ
Published 23 ಜನವರಿ 2022, 13:59 IST
Last Updated 23 ಜನವರಿ 2022, 13:59 IST
ಮೇರಿ ಕೋಮ್ –ಪಿಟಿಐ ಚಿತ್ರ
ಮೇರಿ ಕೋಮ್ –ಪಿಟಿಐ ಚಿತ್ರ   

ನವದೆಹಲಿ: ಕೋವಿಡ್‌–19 ಪ್ರಕರಣಗಳ ಹೆಚ್ಚಳ ಮತ್ತು ಅತಿಯಾದ ಚಳಿಯಿಂದಾಗಿ ದೆಹಲಿಯಲ್ಲಿ ಅಭ್ಯಾಸ ನಡೆಸದೇ ಇರಲು ನಿರ್ಧರಿಸಿರುವ ಬಾಕ್ಸರ್ ಮೇರಿ ಕೋಮ್ ತವರೂರು ಮಣಿಪುರಕ್ಕೆ ಸ್ಥಳಾಂತರಗೊಂಡಿದ್ದಾರೆ.

ಆರು ಬಾರಿಯ ವಿಶ್ವ ಚಾಂಪಿಯನ್‌ ಮತ್ತು ಒಲಿಂಪಿಕ್ಸ್‌ ಪದಕ ವಿಜೇತೆ ಮೇರಿ ಕೋಮ್ ಮೇ ತಿಂಗಳಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌, ಜುಲೈನಿಂದ ಆಗಸ್ಟ್ ವರೆಗೆ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಸಿದ್ಧರಾಗುತ್ತಿದ್ದಾರೆ.

‘ಕೆಲವು ದಿನಗಳಿಂದ ಮಣಿಪುರದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಭಾರತ ಬಾಕ್ಸಿಂಗ್ ಫೆಡರೇಷನ್ ಮತ್ತು ಕ್ರೀಡಾ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು ಇಲ್ಲಿಗೆ ಬಂದಿದ್ದೇನೆ. ದೆಹಲಿಯಲ್ಲಿ ಈಚೆಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಸೂರ್ಯ ಗೋಚರಿಸುವುದೇ ಅಪರೂಪವಾಗಿದೆ’ ಎಂದು ಮೇರಿ ಕೋಮ್ ಹೇಳಿದರು.

ADVERTISEMENT

ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಬಯಸಿರುವ ಮೇರಿ ಕೋಮ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ. ಕೋಚ್‌ ಚೋಟೆ ಲಾಲ್ ಯಾದವ್ ಮತ್ತು ನೆರವು ಸಿಬ್ಬಂದಿ ಜೊತೆ ಈಗ ತಮ್ಮದೇ ಅಕಾಡೆಮಿಯಲ್ಲಿದ್ದಾರೆ. ಅಕಾಡೆಮಿಗೆ ಸಾಯ್ ಮಾನ್ಯತೆ ನೀಡಿದೆ.

ದೆಹಲಿಯಲ್ಲಿ ಮಹಿಳೆಯರ ರಾಷ್ಟ್ರೀಯ ಬಾಕ್ಸಿಂಗ್ ಶಿಬಿರ ಆರಂಭವಾಗಿದ್ದು 42 ಮಂದಿ ಅಭ್ಯಾಸ ಮಾಡುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಲವ್ಲಿನಾನ ಬೋರ್ಗೊಹೈನ್ ಈ ವಾರಾಂತ್ಯದಲ್ಲಿ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಅವರು 69 ಕೆಜಿ ವಿಭಾಗದಲ್ಲಿ ಅಭ್ಯಾಸ ಮಾಡಲಿದ್ದಾರೆ. ಪೂಜಾ ರಾಣಿ (75 ಕೆಜಿ) ಕೂಡ ಕೆಲವೇ ದಿನಗಳಲ್ಲಿ ಶಿಬಿರಕ್ಕೆ ಹಾಜರಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.