ADVERTISEMENT

ಏಷ್ಯಾ ಹಾಕಿ ಚಾಂಪಿಯನ್‌ಷಿಪ್‌: ಜಪಾನ್‌ಗೆ ಮಣಿದ ಭಾರತ

ಟೂರ್ನಿಯಿಂದ ಹೊರಬೀಳುವ ಆತಂಕ

ಪಿಟಿಐ
Published 24 ಮೇ 2022, 14:42 IST
Last Updated 24 ಮೇ 2022, 14:42 IST
ಭಾರತ ಮತ್ತು ಜಪಾನ್ ಆಟಗಾರರ ನಡುವಣ ಪೈಪೋಟಿ– ಟ್ವಿಟರ್‌ ಚಿತ್ರ
ಭಾರತ ಮತ್ತು ಜಪಾನ್ ಆಟಗಾರರ ನಡುವಣ ಪೈಪೋಟಿ– ಟ್ವಿಟರ್‌ ಚಿತ್ರ   

ಜಕಾರ್ತ: ಹೊಸ ಆಟಗಾರರೇ ಹೆಚ್ಚಿರುವ ಭಾರತ ತಂಡವು ಏಷ್ಯಾಕಪ್ ಹಾಕಿ ಟೂರ್ನಿಯ ಎರಡನೇ ಲೀಗ್ ಪಂದ್ಯದಲ್ಲಿ ಮಂಗಳವಾರ ಜಪಾನ್ ಎದುರು ಮುಗ್ಗರಿಸಿತು.

ಇಲ್ಲಿ ನಡೆದ ಎ ಗುಂಪಿನ ಹಣಾಹಣಿಯಲ್ಲಿ ಜಪಾನ್ 5–2ರಿಂದ ಗೆದ್ದಿತು. ಈ ಸೋಲಿನೊಂದಿಗೆ ಭಾರತ ತಂಡವು ಚಾಂಪಿಯನ್‌ಷಿಪ್‌ನಿಂದ ಹೊರಬೀಳುವ ಆತಂಕ ಎದುರಿಸುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಎದುರು ತಂಡ ಡ್ರಾ ಸಾಧಿಸಿತ್ತು. ಇಂಡೊನೇಷ್ಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ದೊಡ್ಡ ಅಂತರದಲ್ಲಿ ಗೆದ್ದರೂ ನಾಕೌಟ್‌ ಹಂತ ತಲುಪುವುದೂ ಕಷ್ಟ ಎನಿಸಿದೆ.

ಈ ಪಂದ್ಯದಲ್ಲಿ ಜಪಾನ್ ಪರಕೋಸೆ ಕವಾಬಿ (40 ಮತ್ತು 56ನೇ ನಿಮಿಷ), ಕೆನ್‌ ನಗಯೋಶಿ (24ನೇ ನಿಮಿಷ), ರಿಯೊಮಾ ಊಕಾ (49ನೇ ನಿ.) ಮತ್ತು ಕೋಜಿ ಯಮಕಶಿ (54ನೇ ನಿ.) ಗೋಲು ಕೈಚಳಕ ತೋರಿದರು. ಭಾರತ ತಂಡಕ್ಕೆ ಪವನ್ ರಾಜಭರ್ (45ನೇ ನಿ.) ಮತ್ತು ಉತ್ತಮ್ ಸಿಂಗ್‌ (50ನೇ ನಿ.) ಗೋಲು ಗಳಿಸಿದರು.

ADVERTISEMENT

ಪಾಕಿಸ್ತಾನಕ್ಕೆ ಭರ್ಜರಿ ಜಯ: ಡ್ರ್ಯಾಗ್‌ಫ್ಲಿಕರ್ ರಿಜ್ವಾನ್ ಅಲಿ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪಾಕಿಸ್ತಾನ ತಂಡವು 13–0 ಗೋಲುಗಳಿಂದ ಆತಿಥೇಯ ಇಂಡೊನೇಷ್ಯಾವನ್ನು ಮಣಿಸಿತು. ಇದರೊಂದಿಗೆ ಎ ಗುಂಪಿನಿಂದ ಸೂಪರ್ 4 ಹಂತ ಪ್ರವೇಶಿಸುವತ್ತ ದಾಪುಗಾಲಿಟ್ಟಿತು.

ತಂಡದ ಪರ ರಿಜ್ವಾನ್ 15, 25 ಮತ್ತು 43ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಅಜಾಜ್ ಅಹಮದ್‌ (2 ಮತ್ತು 49ನೇ ನಿ.), ಅಬ್ದುಲ್ ರಾಣಾ (4 ಮತ್ತು 17ನೇ ನಿ.), ಮನನ್ ಅಬ್ದುಲ್‌ (6 ಮತ್ತು 19ನೇ ನಿ.) ಕೂಡ ಮಿಂಚಿದರು. ಮುಬಶ್ಶೀರ್ ಅಲಿ (16ನೇ ನಿ.), ಅಲಿ ಶಾನ್‌ (19ನೇ ನಿ.), ಅಲಿ ಘಜನ್‌ಫರ್‌ (35ನೇ ನಿ.) ಮತ್ತು ಮೊಯಿನ್ ಶೇಖ್‌ (45ನೇ ನಿ.) ಕಾಣಿಕೆ ನೀಡಿದರು.

ಬಿ ಗುಂಪಿನ ಪ‍ಂದ್ಯದಲ್ಲಿ ಬಾಂಗ್ಲಾದೇಶ 2–1ರಿಂದ ಒಮನ್ ವಿರುದ್ಧ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.