ADVERTISEMENT

ಇಂದಿನಿಂದ ಏಷ್ಯನ್ ಕುಸ್ತಿ: ಅಂತಿಮ್, ದೀಪಕ್‌ ಮೇಲೆ ಕುತೂಹಲದ ಕಣ್ಣು

ಪಿಟಿಐ
Published 24 ಮಾರ್ಚ್ 2025, 23:44 IST
Last Updated 24 ಮಾರ್ಚ್ 2025, 23:44 IST
ದೀಪಕ್ ಪೂನಿಯಾ–ಪಿಟಿಐ ಸಂಗ್ರಹ ಚಿತ್ರ
ದೀಪಕ್ ಪೂನಿಯಾ–ಪಿಟಿಐ ಸಂಗ್ರಹ ಚಿತ್ರ   

ಅಮ್ಮಾನ್ (ಜೋರ್ಡನ್): ಭಾರತದ ಕುಸ್ತಿಪಟುಗಳ ಪಾಲಿಗೆ 2024 ನಿರಾಶಾದಾಯಕ ವರ್ಷ. ಮಂಗಳವಾರ ಇಲ್ಲಿ ಆರಂಭವಾಗುವ ಸೀನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ ಅನುಭವಿಗಳಾದ ಅಂತಿಮ್ ಪಂಘಲ್ ಮತ್ತು ದೀಪಕ್ ಪೂನಿಯಾ ಅವರಿಗೆ ತಮ್ಮ ನೈಜ ಸಾಮರ್ಥ್ಯ ತೋರಲು ಅವಕಾಶ ಒದಗಿಸಿದೆ.

ಇದೇ 25 ರಿಂದ 30ರವರೆಗೆ ನಡೆಯುವ ಈ ಕೂಟವು ಭಾರತದ ಇತರ ಕುಸ್ತಿಪಟುಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅಸ್ತಿತ್ವ ತೋರಲು ವೇದಿಕೆಯಾಗಿದೆ.

2022–23ರಲ್ಲಿ ಆಯ್ಕೆ ಟ್ರಯಲ್ಸ್‌ನಲ್ಲಿ ಸಾಕಷ್ಟು ಪೈಪೋಟಿ ಎದುರಿಸಿದ್ದ ಅಂತಿಮ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೆಣಸಾಡದೇ ನಿರಾಶೆ ಮೂಡಿಸಿದ್ದರು. ಇಲ್ಲಿ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಪದಕಕ್ಕೆ ಅವರು ಫೇವರಿಟ್ ಎನಿಸದಿದ್ದರೂ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. 20 ವರ್ಷದೊಳಗಿನವರ ವಿಭಾಗದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಉತ್ತುಂಗದ ದಿನಗಳಲ್ಲಿದ್ದಂತೆ ಕಾಣುತ್ತಿಲ್ಲ.

ADVERTISEMENT

23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ರೀತಿಕಾ ಹೂಡ (76 ಕೆ.ಜಿ) ಮತ್ತು 17 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಮಾನಸಿ ಲಾತರ್ (68 ಕೆ.ಜಿ) ಮತ್ತು ಮನಿಷಾ ಭಾನ್ವಲಾ (62 ಕೆ.ಜಿ) ಅವರ ಮೇಲೂ ನಿರೀಕ್ಷೆಯ ಭಾರ ಇದೆ.

2019ರಲ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತ ದೀಪಕ್ ಪೂನಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯಲ್ಲಿ ಪದಕ ತಪ್ಪಿಸಿಕೊಂಡಿದ್ದರು. ಆದರೆ ಪ್ಯಾರಿಸ್ ಕ್ರೀಡೆಗಳಿಗೆ ಅರ್ಹತೆ ಪಡೆಯಲಾಗದೇ ನಿರಾಶೆ ಮೂಡಿಸಿದ್ದರು. ಅವರು ಲಯಕ್ಕೆ ಮರಳಲು ಯತ್ನಿಸುತ್ತಿದ್ದಾರೆ. 92 ಕೆ.ಜಿ ವಿಭಾಗದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಅಮನ್ ಸೆಹ್ರಾವತ್ ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ 23 ವರ್ಷದೊಳಗಿನವರ ವಿಭಾಗದ ವಿಶ್ವ ಚಾಂಪಿಯನ್ ಚಿರಾಗ್ ಅವರು 57 ಕೆ.ಜಿ. ವಿಭಾಗದಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಕೆಲವು ವರ್ಷಗಳಿಂದ ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು ಸಾಕಷ್ಟು ಸುಧಾರಣೆ ಕಂಡಿದ್ದಾರೆ. ಆದರೆ ರಾಷ್ಟ್ರೀಯ ಶಿಬಿರಗಳು ಮತ್ತು ಸ್ಪರ್ಧೆಗಳಿಲ್ಲದ ಕಾರಣ ಈಗಲೇ ಪೈಲ್ವಾನರ ಪದಕ ಸಾಧ್ಯತೆಯ ಭವಿಷ್ಯ ನುಡಿಯುವುದು ಕಷ್ಟ. ಆದರೆ ಒಂದೆರಡು ಮಂದಿ ಅನಿರೀಕ್ಷಿತ ಯಶಸ್ಸಿನ ಓಟದಲ್ಲಿ ಮುನ್ನಡೆದರೆ ಅಚ್ಚರಿಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.