ADVERTISEMENT

ಟಿ.ಟಿ: ಮಣಿಕಾ, ಶರತ್‌ ಸವಾಲು ಅಂತ್ಯ

ಪಿಟಿಐ
Published 31 ಆಗಸ್ಟ್ 2018, 11:39 IST
Last Updated 31 ಆಗಸ್ಟ್ 2018, 11:39 IST
ಭಾರತದ ಶರತ್‌ ಕಮಲ್‌ ಆಟದ ವೈಖರಿ -ಎಎಫ್‌ಪಿ ಚಿತ್ರ
ಭಾರತದ ಶರತ್‌ ಕಮಲ್‌ ಆಟದ ವೈಖರಿ -ಎಎಫ್‌ಪಿ ಚಿತ್ರ   

ಜಕಾರ್ತ: ಭಾರತದ ಟೇಬಲ್‌ ಟೆನಿಸ್‌ ಸ್ಪರ್ಧಿಗಳಾದ ಮಣಿಕಾ ಬಾತ್ರಾ, ಅಚಂತಾ ಶರತ್‌ ಕಮಲ್‌ ಮತ್ತು ಜಿ.ಸತಿಯನ್‌ ಅವರು 18ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ನಿರಾಸೆ ಕಂಡಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್ ಹಣಾಹಣಿಯಲ್ಲಿ ಮಣಿಕಾ 2–11, 8–11, 8–11, 11–6, 11–4ರಲ್ಲಿ ಚೀನಾದ ವಾಂಗ್‌ ಮನ್ಯು ಎದುರು ಸೋತರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ವಾಂಗ್‌ ಮೊದಲ ಮೂರು ಗೇಮ್‌ಗಳಲ್ಲಿ ನಿರಾಯಾಸವಾಗಿ ಗೆದ್ದರು. ನಾಲ್ಕನೇ ಗೇಮ್‌ನಲ್ಲಿ ಮಣಿಕಾ ತಿರುಗೇಟು ನೀಡಿದರು. ಐದನೇ ಗೇಮ್‌ನಲ್ಲಿ ಮಿಂಚಿದ ವಾಂಗ್‌ ಗೆಲುವಿನ ತೋರಣ ಕಟ್ಟಿದರು.

ADVERTISEMENT

ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಹೋರಾಟದಲ್ಲಿ ಶರತ್‌ ಕಮಲ್‌ 7–11, 11–9, 10–12, 16–14, 9–11ರಲ್ಲಿ ಚೀನಾ ತೈಪೆಯ ಚಿಹ್‌ ಯುವಾನ್‌ ಚುನಾಗ್‌ ವಿರುದ್ಧ ಪರಾಭವಗೊಂಡರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 33ನೇ ಸ್ಥಾನದಲ್ಲಿರುವ ಶರತ್‌ ಮೊದಲ ಗೇಮ್‌ನಲ್ಲಿ ನಿರಾಸೆ ಕಂಡರು. ಇದರಿಂದ ಎದೆಗುಂದದ ಅವರು ನಂತರದ ಗೇಮ್‌ನಲ್ಲಿ ತಿರುಗೇಟು ನೀಡಿದರು. ಮೂರನೇ ಗೇಮ್‌ನಲ್ಲಿ ಚುನಾಗ್‌ ಮಿಂಚಿದರೆ, ನಾಲ್ಕನೇ ಗೇಮ್‌ನಲ್ಲಿ ಶರತ್‌ ತಿರುಗೇಟು ನೀಡಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 14ನೇ ಸ್ಥಾನ ಹೊಂದಿರುವ ಚುನಾಗ್‌ ಅಂತಿಮ ಗೇಮ್‌ನಲ್ಲಿ ಮೋಡಿ ಮಾಡಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಇನ್ನೊಂದು ಪಂದ್ಯದಲ್ಲಿ ಸತಿಯನ್‌ 11–9, 4–11, 9–11, 6–11, 10–12ರಲ್ಲಿ ಜಪಾನ್‌ನ ಕೆಂಟಾ ಮತ್ಸುದೈರಾ ಎದುರು ಶರಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.