ADVERTISEMENT

ಆನ್‌ಲೈನ್ ಚೆಸ್: ಭಾರತ ತಂಡಗಳು ಫೈನಲ್‌ಗೆ

ಪಿಟಿಐ
Published 24 ಅಕ್ಟೋಬರ್ 2020, 11:37 IST
Last Updated 24 ಅಕ್ಟೋಬರ್ 2020, 11:37 IST
ನಿಹಾಲ್ ಸರೀನ್
ನಿಹಾಲ್ ಸರೀನ್   

ಚೆನ್ನೈ: ಅಗ್ರ ಶ್ರೇಯಾಂಕ ಹೊಂದಿರುವ ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳು ಶನಿವಾರ ಏಷ್ಯನ್ ಆನ್‌ಲೈನ್ ಚೆಸ್ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿದವು. ಬಿ.ಅಧಿಪನ್ ಮತ್ತು ಆರ್.ವೈಶಾಲಿ ಅವರು ತೋರಿದ ಅಮೋಘ ಸಾಮರ್ಥ್ಯ ಇದಕ್ಕೆ ಕಾರಣ. ಕಜಕಸ್ತಾನ ಮತ್ತು ಮಂಗೋಲಿಯಾ ಎದುರಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಭಾರತ ತಂಡಗಳು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದವು.

ಪುರುಷರ ತಂಡವು ಕಜಕಸ್ತಾನವನ್ನು 2.5–1.5ರಲ್ಲಿ ಮಣಿಸಿ 3–1ರಲ್ಲಿ ಹಿಂದಿಕ್ಕಿದರೆ ಮಹಿಳಾ ತಂಡ ಮಂಗೋಲಿಯಾವನ್ನು 3.5–0.5ರಲ್ಲಿ ಸೋಲಿಸಿ 4–0 ಅಂತರದ ಮೇಲುಗೈ ಸಾಧಿಸಿತು.

ಬಿ.ಅಧಿಪನ್ ಅವರು ತಮ್ಮ ಎರಡೂ ಪಂದ್ಯಗಳಲ್ಲಿ ರೈನತ್ ಜುಮಬಯೆವ್ ಎದುರು ಭರ್ಜರಿ ಜಯ ಸಾಧಿಸಿದರು. ಮೊದಲ ಹಣಾಹಣಿಯಲ್ಲಿ ಅಧಿಪನ್ ಜಯ ಸಾಧಿಸಿದರೆ ನಿಹಾಲ್ ಸರೀನ್, ಎಸ್‌.ಪಿ. ಸೇತುರಾಮನ್ ಮತ್ತು ಕೆ.ಶಶಿಕಿರಣ್ ಡ್ರಾ ಸಾಧಿಸಿದರು. ಎರಡನೇ ಹಣಾಹಣಿಯಲ್ಲಿ ಅಧಿಪನ್ ಜೊತೆಯಲ್ಲಿ ಸರೀನ್ ಮತ್ತು ಸೇತುರಾಮನ್ ಕೂಡ ಗೆಲುವು ದಾಖಲಿಸಿದರು. ಆದರೆ ಶಶಿಕಿರಣ್, ಡೆನಿಸ್ ಮಖನೆವ್‌ಗೆ ಮಣಿದರು. ನಾಯಕ ಶೇಖರ್ ಗಂಗೂಲಿ ಶನಿವಾರ ಒಂದು ಪಂದ್ಯವನ್ನೂ ಆಡಲಿಲ್ಲ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ADVERTISEMENT

ಮಹಿಳೆಯರ ಪರಾಕ್ರಮ:ಮಹಿಳೆಯರ ವಿಭಾಗದ ಎರಡೂ ಪಂದ್ಯಗಳನ್ನು ಭಾರತ ಏಕಪಕ್ಷೀಯ ಜಯ ಗಳಿಸಿತು. ಪ್ರಾಥಮಿಕ ಹಂತದಲ್ಲಿ ಅಮೋಘ ಸಾಮರ್ಥ್ಯ ತೋರಿ ಚಿನ್ನದ ಪದಕ ಗೆದ್ದಿದ್ದ ವೈಶಾಲಿ ಎರಡೂ ಪಂದ್ಯಗಳಲ್ಲಿ ಭಟ್ಕುಯಾಂಗ್ ಮುಂಗತಲ್ ಅವರನ್ನು ಮಣಿಸಿದರು. ಪದ್ಮಿಣಿ ರಾವುತ್ ಮತ್ತು ಪಿ.ವಿ.ನಂದಿತಾ ಕೂಡ ಮೊದಲ ಪಂದ್ಯಗಳಲ್ಲಿ ಜಯ ಗಳಿಸಿದರು. ನಾಯಕಿ ಮೇರಿ ಆ್ಯನ್ ಗೋಮೆಜ್ ಡ್ರಾಗೆ ತೃಪ್ತಿಪಟ್ಟುಕೊಂಡರು. ಎರಡನೇ ಹಣಾಹಣಿಯಲ್ಲಿ ವೈಶಾಲಿ, ಭಕ್ತಿ ಕುಲಕರ್ಣಿ, ರಾವುತ್ ಮತ್ತು ನಂದಿತಾ ಗೆಲುವಿನ ನಗೆ ಬೀರಿದರು. ಫೈನಲ್‌ನಲ್ಲಿ ಭಾರತಕ್ಕೆ ಇಂಡೊನೇಷ್ಯಾ ಎದುರಾಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.