ADVERTISEMENT

ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌: ನೀರೂಗೆ ಚಿನ್ನ, ಭೌನೀಶ್‌ಗೆ ಬೆಳ್ಳಿ

ಪಿಟಿಐ
Published 25 ಆಗಸ್ಟ್ 2025, 15:58 IST
Last Updated 25 ಆಗಸ್ಟ್ 2025, 15:58 IST
ನೀರೂ ಧಂಡಾ
ನೀರೂ ಧಂಡಾ   

ಶಿಮ್ಕೆಟ್‌ (ಕಜಾಕಸ್ತಾನ): ರಾಷ್ಟ್ರೀಯ ಗೇಮ್ಸ್‌ ಚಾಂಪಿಯನ್‌ ನೀರೂ ಧಂಡಾ ಅವರು ಇಲ್ಲಿ ನಡೆಯುತ್ತಿರುವ 16ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವೈಯಕ್ತಿಕ ಟ್ರ್ಯಾಪ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಪುರುಷರ ವಿಭಾಗದಲ್ಲಿ ಭೌನೀಶ್ ಮೆಂದಿರತ್ತಾ ಅವರು ಬೆಳ್ಳಿ ಪದಕಕ್ಕೆ ಗುರಿಯಿಟ್ಟರು. ಅದರೊಂದಿಗೆ ಭಾರತದ ಶೂಟರ್‌ಗಳು ಟೂರ್ನಿಯಲ್ಲಿ 50 ಪದಕಗಳನ್ನು ಗೆದ್ದ ಸಾಧನೆ ಮಾಡಿದರು.

50 ಶಾಟ್‌ಗಳ ಫೈನಲ್‌ನಲ್ಲಿ ನೀರೂ ಅವರು 43 ಹಿಟ್‌ಗಳೊಡನೆ ಚಿನ್ನ ಗೆದ್ದರು. ಭಾರತದ ಮತ್ತೊಬ್ಬ ಶೂಟರ್‌ ಆಶಿಮಾ ಅಹ್ಲಾವತ್‌ ಅವರು (29) ಕಂಚಿನ ಪದಕ ಜಯಿಸಿದರು. ಕತಾರ್‌ನ ಬೆಸಿಲ್‌ ರೇ (37) ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ನೀರೂ, ಆಶಿಮಾ ಹಾಗೂ ಪ್ರೀತಿ ರಜಾಕ್‌ ಅವರು ಒಟ್ಟು 319 ಅಂಕಗಳೊಡನೆ ಮಹಿಳೆಯರ ಟ್ರ್ಯಾಪ್‌ ತಂಡ ವಿಭಾಗದಲ್ಲಿಯೂ ಚಾಂಪಿಯನ್‌ ಆದರು. ಚೀನಾ (301) ಬೆಳ್ಳಿಗೆ ತೃಪ್ತಿಪಟ್ಟರೆ, ಕುವೈತ್‌ (295) ಕಂಚು ಜಯಿಸಿತು.

ADVERTISEMENT

ಪುರುಷರ ಟ್ರ್ಯಾಪ್‌ ಫೈನಲ್‌ನಲ್ಲಿ ಭೌನೀಶ್‌ 45 ಶಾಟ್‌ಗಳಲ್ಲಿ ಗುರಿ ತಲುಪಿದರು. ಚೀನಾದ ಶೂಟರ್‌ಗಳಾದ ಯಿಂಗ್‌ ಕಿ (47) ಹಾಗೂ ಪೆಂಗ್‌ಯು ಶೆನ್‌ (35) ಕ್ರಮವಾಗಿ ಚಿನ್ನ ಹಾಗೂ ಕಂಚು ಜಯಿಸಿದರು.

ಆದರೆ, ಒಲಿಂಪಿಕ್ಸ್ ಡಬಲ್ ಪದಕವಿಜೇತೆ ಮನು ಭಾಕರ್ ಅವರು ಮಹಿಳೆಯರ 25 ಮೀಟರ್‌ ಪಿಸ್ತೂಲ್‌ ವಿಭಾಗದಲ್ಲಿ ನಿರಾಶೆ ಅನುಭವಿಸಿದರು. ನಾಲ್ಕನೇ ಸ್ಥಾನ ಪಡೆದ ಅವರು, ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದರು.

ಫೈನಲ್‌ ಸ್ಪರ್ಧೆಯಲ್ಲಿ ಭಾಕರ್‌ ಅವರು 25 ಅಂಕಗಳನ್ನು ಗಳಿಸಿದರು. ತಲಾ 39 ಅಂಕಗಳನ್ನು ಗಳಿಸಿದ್ದ ಚೀನಾದ ಯೂಯೂ ಜಾಂಗ್‌ ಹಾಗೂ ಜಿಯಾರುಷುವನ್‌ ಷಿಯಾವೊ ಅವರು ಶೂಟ್‌–ಆಫ್‌ನಲ್ಲಿ 4–3 ಅಂಕ ಪಡೆಯುವುದರೊಂದಿಗೆ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದುಕೊಂಡರು.

ಸ್ಪರ್ಧೆಯಲ್ಲಿದ್ದ ಮತ್ತೊಬ್ಬ ಭಾರತೀಯ ಶೂಟರ್‌ ಇಶಾ ಸಿಂಗ್‌ (18) 6ನೇ ಸ್ಥಾನ ಪಡೆಯುವುದರೊಂದಿಗೆ ನಿರಾಶೆ ಅನುಭವಿಸಿದರು. ಅವರು ಕ್ವಾಲಿಫಿಕೇಷನ್‌ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದರು.

ಭಾಕರ್‌, ಇಶಾ ಹಾಗೂ ಸಿಮ್ರನ್‌ಪ್ರೀತ್‌ ಕೌರ್ ಬ್ರಾರ್ ಅವರು ತಂಡ ವಿಭಾಗದಲ್ಲಿ 1,749 ಪಾಯಿಂಟ್ಸ್‌ಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡರು. ಚೀನಾ ಸ್ವರ್ಣ ಗೆದ್ದರೆ, ಕೊರಿಯಾ ಬೆಳ್ಳಿ ಗೆದ್ದಿತು.

ಜೂನಿಯರ್ಸ್ ಪರಾಕ್ರಮ: ಟೂರ್ನಿಯ 25 ಮೀಟರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ಸೀನಿಯರ್‌ ಶೂಟರ್‌ಗಳು ಪದಕ ಗೆಲ್ಲುವಲ್ಲಿ ವಿಫಲವಾದರೆ, ಜೂನಿಯರ್‌ ಸ್ಪರ್ಧಿಗಳು ಎಲ್ಲ ಮೂರು ಪದಕಗಳನ್ನು ಜಯಿಸಿ ಪರಾಕ್ರಮ ಮೆರೆದರು.

ಪಾಯಲ್‌ ಖತ್ರಿ 36 ಪಾಯಿಂಟ್ಸ್‌ಗಳೊಂದಿಗೆ ಸ್ವರ್ಣಕ್ಕೆ ಮುತ್ತಿಕ್ಕಿದರೆ, ನಾಮ್ಯ ಕಪೂರ್‌ (30) ಬೆಳ್ಳಿ ಹಾಗೂ ತೇಜಸ್ವಿನಿ (27) ಕಂಚಿನ ಪದಕ ಗೆದ್ದುಕೊಂಡರು.

ಈ ಮೂವರು, ಜೂನಿಯರ್‌ ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯ ತಂಡ ವಿಭಾಗದಲ್ಲಿ ರಜತ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಫೈನಲ್‌ನಲ್ಲಿ ಭಾರತ ತಂಡವು 1,700 ಅಂಕ ಸಂಪಾದಿಸಿದರೆ, ಕೊರಿಯಾ 1,714 ಪಾಯಿಂಟ್ಸ್‌ಗಳೊಡನೆ ಚಿನ್ನ ಜಯಿಸಿತು.

ಆಶಿಮಾ ಅಹ್ಲಾವತ್‌
ಜೂನಿಯರ್‌ ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಜೂನಿಯರ್‌ ಮಹಿಳಾ ತಂಡ. (ಎಡದಿಂದ) ನಾಮ್ಯ ಕಪೂರ್‌ ಪಾಯಲ್‌ ಖತ್ರಿ ತೇಜಸ್ವಿನಿ –‘ಎಕ್ಸ್‌’ ಚಿತ್ರ
ಭೌನೀಶ್ ಮೆಂದಿರತ್ತಾ
ಪ್ರೀತಿ ರಜಾಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.