ADVERTISEMENT

ಏಷ್ಯನ್ ಚಾಂಪಿಯನ್‌ಷಿಪ್‌ ಟೇಬಲ್‌ ಟೆನಿಸ್‌: ಭಾರತ ಮಹಿಳೆಯರಿಗೆ ಐತಿಹಾಸಿಕ ಕಂಚು

ಏಷ್ಯನ್ ಚಾಂಪಿಯನ್‌ಷಿಪ್‌ ಟೇಬಲ್‌ ಟೆನಿಸ್‌: ಸೆಮಿಗೆ ಪುರುಷರ ತಂಡ

ಪಿಟಿಐ
Published 9 ಅಕ್ಟೋಬರ್ 2024, 14:45 IST
Last Updated 9 ಅಕ್ಟೋಬರ್ 2024, 14:45 IST
ಭಾರತದ ಮಣಿಕಾ ಬಾತ್ರಾ
ಭಾರತದ ಮಣಿಕಾ ಬಾತ್ರಾ   

ಅಸ್ತಾನಾ : ಭಾರತದ ಮಹಿಳೆಯರ ಟೇಬಲ್‌ ಟೆನಿಸ್‌ ತಂಡವು ಬುಧವಾರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಸಾಧನೆ ಮಾಡಿದೆ. ಪುರುಷರ ತಂಡವು ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಮೂರನೇ ಬಾರಿ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದೆ. 

ಭಾರತದ ವನಿತೆಯರು ಸೆಮಿಫೈನಲ್‌ ಹಣಾಹಣಿಯಲ್ಲಿ 1–3ರಿಂದ ಜಪಾನ್‌ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಏಷ್ಯನ್‌ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ದಕ್ಕಿದ ಚೊಚ್ಚಲ ಪದಕ ಇದಾಗಿದೆ.

ಮಂಗಳವಾರ ನಡೆದ ಕ್ವಾರ್ಟರ್​ಫೈನಲ್​ನಲ್ಲಿ ಭಾರತದ ಮಹಿಳೆಯರು 3–2ರಿಂದ ಪ್ಯಾರಿಸ್​ ಒಲಿಂಪಿಕ್ಸ್​ ಕಂಚು ವಿಜೇತ ದಕ್ಷಿಣ ಕೊರಿಯಾ ತಂಡವನ್ನು ಮಣಿಸುವ ಮೂಲಕ ಪದಕ ಖಚಿತ ಪಡಿಸಿಕೊಂಡಿದ್ದರು.

ADVERTISEMENT

ಎರಡನೇ ಶ್ರೇಯಾಂಕದ ಕೊರಿಯಾ ವಿರುದ್ಧ ಪ್ರಬಲ ಪ್ರದರ್ಶನ ತೋರಿದ್ದ ಭಾರತ, ನಾಲ್ಕನೇ ಶ್ರೇಯಾಂಕದ ಜಪಾನ್ ವಿರುದ್ಧ ಮುಗ್ಗರಿಸಿತು. ಅಚ್ಚರಿಯೆಂದರೆ ಭಾರತದ ಅಗ್ರಮಾನ್ಯ ಆಟಗಾರ್ತಿ ಶ್ರೀಜಾ ಅಕುಲಾ ಬೆಂಚ್‌ನಲ್ಲಿ ಉಳಿದಿದ್ದರು.

ಹಿಂದಿನ ಸುತ್ತಿನಲ್ಲಿ ಮಿಂಚಿದ್ದ ಐಹಿಕಾ ಮುಖರ್ಜಿ, ವಿಶ್ವದ ಏಳನೇ ಕ್ರಮಾಂಕದ ಮಿವಾ ಹರಿಮೊಟೊ ಅವರಿಗೆ ಪ್ರಬಲ ಪೈಪೋಟಿ ನೀಡಿ 8-11, 11-9, 8-11, 13-11, 7-4ರಿಂದ ಮಣಿದರು.

ಎರಡನೇ ಪಂದ್ಯದಲ್ಲಿ ಮಣಿಕಾ ಬಾತ್ರಾ 11-6, 11-5, 11-8ರಿಂದ ವಿಶ್ವದ 17ನೇ ರ‍್ಯಾಂಕ್‌ನ ಸತ್ಸುಕಿ ಓಡೋ ವಿರುದ್ಧ ಜಯ ಸಾಧಿಸುವುದರೊಂದಿಗೆ ತಂಡದ ಸ್ಕೋರನ್ನು 1–1 ಸಮಬಲಗೊಳಿಸಿದರು. ಆದರೆ, ಮೂರನೇ ಪಂದ್ಯದಲ್ಲಿ ಸುತೀರ್ಥ ಮುಖರ್ಜಿ 9–11, 4–11, 13–15 ರಿಂದ ಮಿಮಾ ಇಟೊ ಅವರಿಗೆ ಶರಣಾದರು.

ನಿರ್ಣಾಯಕ ನಾಲ್ಕನೇ ಪಂದ್ಯದಲ್ಲಿ ಮಣಿಕಾ ಅವರಿಗೆ ಹಿಂದಿನ ಫಾರ್ಮ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಿವಾ ವಿರುದ್ಧ 11-6, 6-11, 11-2, 11-3ರಿಂದ ಮಣಿಕಾ ಸೋಲುವುದರಿಂದ ಭಾರತದ ಅಭಿಯಾನ ಕಂಚಿನೊಂದಿಗೆ ಮುಗಿಯಿತು.

ಸೆಮಿಗೆ ಪುರುಷರ ತಂಡ: ಭಾರತದ ಪುರುಷರ ತಂಡವು ಕ್ವಾರ್ಟರ್‌ ಫೈನಲ್‌ನಲ್ಲಿ 3–1ರಿಂದ ಕಜಕಿಸ್ತಾನವನ್ನು ಸೋಲಿಸಿ, ಸೆಮಿಫೈನಲ್‌ಗೆ ಲಗ್ಗೆ ಹಾಕಿತು.

ಮೊದಲ ಪಂದ್ಯದಲ್ಲಿ ವಿಶ್ವದ 60ನೇ ಕ್ರಮಾಂಕದ ಮಾನವ್‌ ಟಕ್ಕರ್‌ 11-9, 11-7, 11–6ರಿಂದ ಕಜಕಸ್ತಾನದ ಅಗ್ರಮಾನ್ಯ ಆಟಗಾರ ಕಿರಿಲ್ ಗೆರಾಸಿಮೆಂಕೊ ವಿರುದ್ಧ ಗೆಲುವು ಸಾಧಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಆದರೆ, ಹರ್ಮೀತ್ ದೇಸಾಯಿ 6–11, 5–11, 8–11ರಿಂದ ಅಲನ್ ಕುರ್ಮಂಗಲಿಯೆವ್ ವಿರುದ್ಧ ಸೋಲುವ ಮೂಲಕ ಸ್ಕೋರ್‌ 1–1 ಸಮಬಲಗೊಂಡಿತು.

ಮೂರನೇ ಪಂದ್ಯದಲ್ಲಿ ಅನುಭವಿ ಶರತ್‌ ಕಮಲ್‌ 11-4, 11-7, 12-10ರಿಂದ ಐಡೋಸ್ ಕೆಂಜಿಗುಲೋವ್ ವಿರುದ್ಧ ಗೆದ್ದು ಭಾರತದ ಮುನ್ನಡೆಯನ್ನು 2–1ಕ್ಕೆ ಹೆಚ್ಚಿಸಿದರು. ನಾಲ್ಕನೇ ಪಂದ್ಯದಲ್ಲಿ ಹರ್ಮೀತ್‌ ಬಿರುಸಿನ ಬ್ಯಾಕ್‌ಹ್ಯಾಂಡ್‌ಗಳು ಮತ್ತು ಫೋರ್‌ಹ್ಯಾಂಡ್‌ ಹೊಡೆತದೊಂದಿಗೆ ಗೆರಾಸಿಮೆಂಕೊ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ತಂಡವು ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.

2023 ಮತ್ತು 2021ರ ಆವೃತ್ತಿಯಲ್ಲಿ ಕಂಚು ಗೆದ್ದಿರುವ ಭಾರತ ತಂಡವು, ಈ ಬಾರಿಯೂ ಕನಿಷ್ಠ ಕಂಚಿನ ಪದಕವನ್ನು ಖಚಿತ ಪಡಿಸಿಕೊಂಡಿದೆ. ಚೀನಾ ತೈಪೆ ಮತ್ತು ಜಪಾನ್‌ ನಡುವಿನ ಪಂದ್ಯದ ವಿಜೇತ ತಂಡವನ್ನು ಭಾರತ ಗುರುವಾರ ಸೆಮಿಫೈನಲ್‌ನಲ್ಲಿ ಎದುರಿಸಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.