ADVERTISEMENT

ಕುಸ್ತಿ: ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಜಿತೇಂದರ್‌

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ದೀಪಕ್ ಪೂನಿಯಾ, ರಾಹುಲ್‌ ಅವಾರೆಗೆ ಸೋಲು

ಪಿಟಿಐ
Published 23 ಫೆಬ್ರುವರಿ 2020, 19:48 IST
Last Updated 23 ಫೆಬ್ರುವರಿ 2020, 19:48 IST

ನವದೆಹಲಿ : ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸುವುದರ ಮೂಲಕ ಭಾರತದ ಜಿತೇಂದರ್ ಕುಮಾರ್ ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಸ್ಪರ್ಧೆಗೆ ಆಯ್ಕೆಯಾದರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮುಗ್ಗರಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಕೆ.ಡಿ.ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಗಳ ಪುರುಷರ 74 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಜಿತೇಂದರ್ ಮಂಗೋಲಿಯಾದ ಸುಮಿಯಾಬಾಜರ್ ಜಂದನ್‌ಬುಡ್ ವಿರುದ್ಧ 2–1ರ ಜಯ ಸಾಧಿಸಿದರು. ಆದರೆ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌, ಕಿರ್ಗಿಸ್ತಾನದ ಡಾನಿಯರ್ ಕೈಸನೊವ್‌ಗೆ 1–3ರಲ್ಲಿ ಮಣಿದರು.

ಅರ್ಹತಾ ಸುತ್ತಿನಲ್ಲಿ ಸುಲಭವಾಗಿ ಜಯ ಗಳಿಸಿದ್ದ ಜಿತೇಂದರ್ ಕ್ವಾರ್ಟರ್ ಫೈನಲ್‌ನಲ್ಲಿ ಇರಾನ್‌ನ ಮೊಸ್ತಫಾ ಮೊಹಮ್ಮದಲಿ ವಿರುದ್ಧ ಗೆದ್ದಿದ್ದರು. ಅವರ ಸಾಮರ್ಥ್ಯಕ್ಕೆ ಮೆಚ್ಚಿದ ರಾಷ್ಟ್ರೀಯ ಕುಸ್ತಿ ಫೆಡರೇಷನ್ ಒಲಿಂಪಿಕ್ಸ್ ಅರ್ಹತಾ ಸುತ್ತಿಗೆ ಆಯ್ಕೆ ಮಾಡಿತು. ಕಿರ್ಗಿಸ್ತಾನದ ಬಿಷೆಕ್‌ನಲ್ಲಿ ಅರ್ಹತಾ ಸುತ್ತಿನ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ ಅವರು ಫೈನಲ್ ಪ್ರವೇಶಿಸಿದರೆ ಸುಶೀಲ್ ಕುಮಾರ್ ಅವರ ಒಲಿಂಪಿಕ್ಸ್ ಅರ್ಹತಾ ಕನಸು ಭಗ್ನಗೊಳ್ಳಲಿದೆ.

ADVERTISEMENT

ದೀಪಕ್‌, ರಾಹುಲ್‌ಗೆ ಸೋಲು:ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ದೀಪಕ್ ಪೂನಿಯಾ ಮತ್ತು ರಾಹುಲ್ ಅವಾರೆ ಸೆಮಿಫೈನಲ್ ಬೌಟ್‌ಗಳಲ್ಲಿ ಸೋತರು. 86 ಕೆಜಿ ವಿಭಾಗದಲ್ಲಿ ಜಪಾನ್‌ನ ಶುಟಾರೊ ಯಮಡ ಎದುರು ದೀಪಕ್ ಸೋತರು. 61 ಕೆಜಿ ವಿಭಾಗದಲ್ಲಿ ರಾಹುಲ್ ಕಿರ್ಗಿಸ್ತಾನದ ಉಲುಕ್‌ಬೆಕ್ ಜೊಲ್ಡೊಶೆಬ್ಕೆವ್‌ಗೆ 3–5ರಲ್ಲಿ ಮಣಿದರು. ದೀಪಕ್ ಮತ್ತು ರಾಹುಲ್ ಕಂಚಿನ ಪದಕದ ಬೌಟ್‌ಗಳಲ್ಲಿ ಸ್ಪರ್ಧಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.