ADVERTISEMENT

ಮತ್ತೆ ಮಿನುಗಿದ ಫೆಡರರ್‌, ನೊವಾಕ್‌

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಹೋರಾಟ ಮುಗಿಸಿದ ಕೊಕೊ

ಏಜೆನ್ಸೀಸ್
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST
ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಟೆನಿಸ್‌ ಪ್ರಿಯರ ‘ಕಣ್ಮಣಿ’ಗಳಾಗಿರುವ ನೊವಾಕ್‌ ಜೊಕೊವಿಚ್‌ ಮತ್ತು ರೋಜರ್‌ ಫೆಡರರ್‌ ಅವರು ಮೆಲ್ಬರ್ನ್‌ ಪಾರ್ಕ್‌ನಲ್ಲಿ ಮತ್ತೊಮ್ಮೆ ಮಿನುಗಿದರು.

ಈ ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಾಗಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಇವರು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟರು.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಹದಿನಾರರ ಹಂತದ ಹಣಾಹಣಿಯಲ್ಲಿ ಸರ್ಬಿಯಾದ ಜೊಕೊವಿಚ್‌ 6–3, 6–4, 6–4ರಲ್ಲಿ ಅರ್ಜೆಂಟೀನಾದ ಡೀಗೊ ಸ್ವಾರ್ಟ್ಜ್‌ಮನ್‌ ಅವರನ್ನು ಮಣಿಸಿದರು. ಇದರೊಂದಿಗೆ ಟೂರ್ನಿಯಲ್ಲಿ 11ನೇ ಬಾರಿ ಎಂಟರ ಘಟ್ಟ ಪ್ರವೇಶಿಸಿದ ಸಾಧನೆ ಮಾಡಿದರು.

ADVERTISEMENT

ಎಂಟನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಜೊಕೊವಿಚ್‌, ಶರವೇಗದ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಮೂರೂ ಸೆಟ್‌ಗಳಲ್ಲೂ ಸ್ವಾರ್ಟ್ಜ್‌ಮನ್‌ ಅವರನ್ನು ಕಂಗೆಡಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್‌ ಮುಂದಿನ ಸುತ್ತಿನಲ್ಲಿ ಕೆನಡಾದ ಮಿಲೊಸ್‌ ರಾನಿಕ್‌ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ರಾನಿಕ್‌ 6–4, 6–3, 7–5ರಲ್ಲಿ ಮರಿನ್‌ ಸಿಲಿಕ್‌ ಅವರನ್ನು ಸೋಲಿಸಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಹೊಂದಿರುವ ಫೆಡರರ್‌ 4–6, 6–1, 6–2, 6–2ರಲ್ಲಿ ಹಂಗರಿಯ ಮಾರ್ಟನ್‌ ಫುಕ್ಸೊವಿಕ್ಸ್‌ ಅವರನ್ನು ಪರಾಭವಗೊಳಿಸಿದರು.

ಶುಕ್ರವಾರ ನಡೆದಿದ್ದ ‘ಮ್ಯಾರಥಾನ್‌’ ಹೋರಾಟದಲ್ಲಿ ಆತಿಥೇಯ ಆಟಗಾರ ಜಾನ್‌ ಮಿಲ್ಮನ್‌ ಅವರನ್ನು ಮಣಿಸಿ ಅಭಿಮಾನಿಗಳ ಮನ ಗೆದ್ದಿದ್ದ 38 ವರ್ಷ ವಯಸ್ಸಿನ ಫೆಡರರ್‌ ಅವರು ಫುಕ್ಸೊವಿಕ್ಸ್‌ ಎದುರಿನ ಹಣಾಹಣಿಯಲ್ಲಿ ಮೊದಲ ಸೆಟ್‌ ಸೋತರು.

ಇದರಿಂದ ಕಿಂಚಿತ್ತೂ ವಿಚಲಿತರಾಗದ ಸ್ವಿಟ್ಜರ್ಲೆಂಡ್‌ನ ಆಟಗಾರ ನಂತರದ ಮೂರು ಸೆಟ್‌ಗಳಲ್ಲೂ ಮೋಡಿ ಮಾಡಿ ಗೆಲುವಿನ ತೋರಣ ಕಟ್ಟಿದರು. ಇದರೊಂದಿಗೆ ಟೂರ್ನಿಯಲ್ಲಿ 15ನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ದಾಖಲೆ ನಿರ್ಮಿಸಿದರು.

ಮುಂದಿನ ಸುತ್ತಿನಲ್ಲಿ ಫೆಡರರ್‌ಗೆ ಅಮೆರಿಕದ ಟೆನ್ನಿಸ್‌ ಸ್ಯಾಂಡ್‌ಗ್ರೆನ್‌ ಸವಾಲು ಎದುರಾಗಲಿದೆ. ಶ್ರೇಯಾಂಕ ರಹಿತ ಆಟಗಾರ ಸ್ಯಾಂಡ್‌ಗ್ರೆನ್‌ 7–6, 7–5, 6–7, 6–4ರಲ್ಲಿ 12ನೇ ಶ್ರೇಯಾಂಕದ ಆಟಗಾರ ಫಾಬಿಯೊ ಫಾಗ್ನಿನಿಗೆ ಆಘಾತ ನೀಡಿದರು.

ಬಾರ್ಟಿ ಮಿಂಚು: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಆಸ್ಟ್ರೇಲಿಯಾದ ಭರವಸೆಯಾಗಿರುವ ಆ್ಯಷ್ಲೆ ಬಾರ್ಟಿ ಅವರು ಎಂಟರ ಘಟ್ಟಕ್ಕೆ ಮುನ್ನಡೆದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಅಲಂಕರಿಸಿರುವ ಬಾರ್ಟಿ 6–3, 1–6, 6–4ರಲ್ಲಿ ಅಮೆರಿಕದ ಅಲಿಸನ್‌ ರಿಸ್ಕೆ ಎದುರು ಜಯಿಸಿದರು.

ಎರಡು ಬಾರಿಯ ಚಾಂಪಿಯನ್‌ ಪೆಟ್ರಾ ಕ್ವಿಟೋವಾ 6–7, 6–3, 6–2ರಲ್ಲಿ ಮರಿಯಾ ಸಕ್ಕಾರಿ ಅವರನ್ನು ಮಣಿಸಿದರು.

ಕೊಕೊ ಸವಾಲು ಅಂತ್ಯ

ಅಮೆರಿಕದ ವೀನಸ್‌ ವಿಲಿಯಮ್ಸ್‌ ಮತ್ತು ಜಪಾನ್‌ನ ನವೊಮಿ ಒಸಾಕ ಅವರನ್ನು ಮಣಿಸಿ ಅಚ್ಚರಿ ಮೂಡಿಸಿದ್ದ 15 ವರ್ಷ ವಯಸ್ಸಿನ ಕೊಕೊ ಗಾಫ್‌ ಹದಿನಾರರ ಘಟ್ಟದಲ್ಲಿ ಎಡವಿದರು.

ಅಮೆರಿಕದ ಸೋಫಿಯಾ ಕೆನಿನ್‌ 6–7, 6–3, 6–0ರಲ್ಲಿ ತಮ್ಮದೇ ದೇಶದ ಗಾಫ್‌ ಎದುರು ಗೆದ್ದು ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಕೆನಿನ್‌ಗಿಂತಲೂ ಹೆಚ್ಚು (39)
ವಿನ್ನರ್‌ಗಳನ್ನು ಸಿಡಿಸಿದ ಗಾಫ್, 26 ಬಾರಿ ಸ್ವಯಂಕೃತ ತಪ್ಪುಗಳನ್ನು ಮಾಡಿ ಕೈಸುಟ್ಟುಕೊಂಡರು.

ಇನ್ನೊಂದು ಪೈಪೋಟಿಯಲ್ಲಿ ಒನ್ಸ್‌ ಜಬೆವುರ್‌ 7–6, 6–1ರಲ್ಲಿ ಚೀನಾದ ವಾಂಗ್‌ ಕ್ವಿಯಾಂಗ್‌ ಅವರನ್ನು ಮಣಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಟ್ಯುನಿಷಿಯಾದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.

ಕ್ವಾರ್ಟರ್‌ಗೆ ಬೋಪಣ್ಣ ಜೋಡಿ

ಭಾರತದ ರೋಹನ್‌ ಬೋಪಣ್ಣ ಮತ್ತು ಉಕ್ರೇನ್‌ನ ನಾದಿಯಾ ಕಿಚೆನೊಕ್‌ ಅವರು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಎರಡನೇ ಸುತ್ತಿನ ಪೈಪೋಟಿಯಲ್ಲಿ ಬೋಪಣ್ಣ ಮತ್ತು ನಾದಿಯಾ 6–4, 7–6ರಲ್ಲಿ ನಿಕೊಲಾ ಮೆಲಿಚರ್‌ ಮತ್ತು ಬ್ರೂನೊ ಸೋರೆಸ್‌ ಅವರನ್ನು ಸೋಲಿಸಿದರು.

ಭಾರತದ ಲಿಯಾಂಡರ್‌ ಪೇಸ್‌ ಮತ್ತು ಜೆಲೆನಾ ಒಸ್ತಾಪೆಂಕೊ ಅವರು 6–7, 6–3, 10–6ರಲ್ಲಿ ಸ್ಟಾರ್ಮ್‌ ಸ್ಯಾಂಡರ್ಸ್‌ ಮತ್ತು ಮಾರ್ಕ್‌ ಪೋಲಮನ್ಸ್ ವಿರುದ್ಧ ಗೆದ್ದು ಎರಡನೇ ಸುತ್ತಿಗೆ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.