ADVERTISEMENT

ಕೋವಿಡ್‌: ರಿಲೇಯಿಂದ ಹಿಂದೆ ಸರಿದ ಆಸ್ಟ್ರೇಲಿಯಾ

ರಾಯಿಟರ್ಸ್
Published 12 ಏಪ್ರಿಲ್ 2021, 15:04 IST
Last Updated 12 ಏಪ್ರಿಲ್ 2021, 15:04 IST
ಅಥ್ಲೆಟಿಕ್‌ ಟ್ರ್ಯಾಕ್‌
ಅಥ್ಲೆಟಿಕ್‌ ಟ್ರ್ಯಾಕ್‌   

ಮೆಲ್ಬರ್ನ್‌: ಮುಂದಿನ ತಿಂಗಳು ಪೋಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ರಿಲೇ ಚಾಂಪಿಯನ್‌ಷಿಪ್‌ಗೆ ಕ್ರೀಡಾಪಟುಗಳನ್ನು ಕಳುಹಿಸದೇ ಇರಲು ಆಸ್ಟ್ರೇಲಿಯಾ ಅಥ್ಲೆಟಿಕ್ಸ್ ಸಂಸ್ಥೆ (ಅಥ್ಲೆಟಿಕ್ಸ್ ಆಸ್ಟ್ರೇಲಿಯಾ) ನಿರ್ಧರಿಸಿದೆ. ಕೋವಿಡ್‌–19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು ಇದರಿಂದಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ರಿಲೇ ತಂಡ ಕಳೆದುಕೊಳ್ಳುವ ಸಾಧ್ಯತೆ ಇದೆ.

‘ಪೋಲೆಂಡ್ ಮತ್ತು ಗ್ರೇಟರ್ ಯುರೋಪ್‌ನಲ್ಲಿ ಕೋವಿಡ್‌ ಆತಂಕಕಾರಿಯಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರೀಡಾಪಟುಗಳ ಕ್ಷೇಮದ ದೃಷ್ಟಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅಥ್ಲೆಟಿಕ್ಸ್ ಆಸ್ಟ್ರೇಲಿಯಾ ತಿಳಿಸಿದೆ.

’ಪ್ರಮುಖ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದು ಬೇಸರದ ವಿಷಯ. ಆದರೆ ಕ್ರೀಡಾಪಟುಗಳು, ಕೋಚ್‌ಗಳು ಮತ್ತು ಸಿಬ್ಬಂದಿಯ ಆರೋಗ್ಯ–ರಕ್ಷಣೆಗಾಗಿ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಅಥ್ಲೆಟಿಕ್ಸ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಡ್ಯಾರೆನ್ ಗೊಚರ್ ಹೇಳಿದ್ದಾರೆ.

ADVERTISEMENT

ಒಷಿನಿಯಾ ಅಥ್ಲೆಟಿಕ್ಸ್ ಸಂಸ್ಥೆಯ ಜೊತೆಗೂಡಿ ಜೂನ್‌ನಲ್ಲಿ ರಿಲೇಗಾಗಿಯೇ ಪ್ರತ್ಯೇಕ ಕ್ರೀಡಾಕೂಟ ಆಯೋಜಿಸಲಾಗುವುದು. ಆ ಮೂಲಕ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಪ್ರಯತ್ನಿಸಲಾಗುವುದು ಎಂದು ಅಥ್ಲೆಟಿಕ್ಸ್ ಆಸ್ಟ್ರೇಲಿಯಾ ತಿಳಿಸಿದೆ.

ಪುರುಷರ ಮತ್ತು ಮಹಿಳೆಯರ 4x100 ಮೀಟರ್ಸ್, 4x400 ಮೀಟರ್ಸ್ ರಿಲೇಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ಸಿದ್ಧತೆ ನಡೆಸಿದೆ. ಆದರೆ ಈ ವರೆಗೆ ಅರ್ಹತೆ ಗಳಿಸಲಿಲ್ಲ. ಮೇ ಒಂದು ಮತ್ತು ಎರಡರಂದು ನಡೆಯಲಿರುವ ವಿಶ್ವ ರಿಲೇ ಸ್ಪರ್ಧೆಯಲ್ಲಿ ಅಗ್ರ ಎಂಟು ಸ್ಥಾನ ಗಳಿಸುವ ತಂಡಗಳು ಟೋಕಿಯೊ ಟಿಕೆಟ್ ಗಿಟ್ಟಿಸಿಕೊಳ್ಳಲಿವೆ. ದೋಹಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಕೆಲವು ತಂಡಗಳು ಈಗಾಗಲೇ ಒಲಿಂಪಿಕ್ಸ್ ಅರ್ಹತೆ ಗಳಿಸಿವೆ. ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯ ರ‍್ಯಾಂಕಿಂಗ್‌ ಆಧಾರದಲ್ಲಿ ಉಳಿದಿರುವ ಸ್ಥಾನಗಳಿಗೆ ತಂಡಗಳು ಆಯ್ಕೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.