ಬೆಂಗಳೂರು: ಆತಿಥೇಯ ಬಸವನಗುಡಿ ಅಕ್ವಟಿಕ್ ಸೆಂಟರ್ (ಬಿಎಸಿ) ತಂಡವು ಶುಕ್ರವಾರ ಮುಕ್ತಾಯಗೊಂಡ ಎನ್‌ಆರ್‌ಜೆ ರಾಜ್ಯ ಈಜು ಸೀನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಬಸವನಗುಡಿಯ ಕಾರ್ಪೊರೇಷನ್ ಈಜುಕೊಳದಲ್ಲಿ ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಮೂರು ದಿನ ನಡೆದ ಸ್ಪರ್ಧೆಯಲ್ಲಿ 23 ಚಿನ್ನ, 26 ಬೆಳ್ಳಿ, 23 ಕಂಚು ಸೇರಿದಂತೆ ಒಟ್ಟು 72 ಪದಕಗಳೊಂದಿಗೆ 541 ಅಂಕಗಳನ್ನು ಪಡೆದ ಬಿಎಸಿ ತಂಡವು ಚಾಂಪಿಯನ್ ಆದರೆ, 209 ಅಂಕ ಸಂಪಾದಿಸಿದ ಡಾಲ್ಫಿನ್ ಅಕ್ವಟಿಕ್ಸ್ (10 ಚಿನ್ನ, 11 ಬೆಳ್ಳಿ, 4 ಕಂಚು) ರನ್ನರ್ಸ್ ಅಪ್ ಆಯಿತು.
ಬಿಎಸಿಯ ಅನೀಶ್ ಎಸ್. ಗೌಡ (41 ಅಂಕ) ಮತ್ತು ಡಾಲ್ಫಿನ್‌ನ ದಿನಿಧಿ ದೇಸಿಂಗು (38 ಅಂಕ) ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು. ಅವರಿಬ್ಬರೂ ತಲಾ ಎರಡು ಸ್ಪರ್ಧೆಗಳಲ್ಲಿ ಕೂಟ ದಾಖಲೆ ನಿರ್ಮಿಸಿದ್ದಾರೆ.
ಎರಡು ಬಾರಿಯ ಒಲಿಂಪಿಯನ್ ಶ್ರೀಹರಿ ನಟರಾಜ್ ಅವರು ಕೂಟದ ಕೊನೆಯ ದಿನ ನಡೆದ ಪುರುಷರ 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು. ಡಾಲ್ಫಿನ್ ಅಕ್ವಟಿಕ್ಸ್ ಅನ್ನು ಪ್ರತಿನಿಧಿಸಿದ 24 ವರ್ಷ ವಯಸ್ಸಿನ ಈಜುಪಟು 26.02 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಬಿಎಸಿಯ ಆಕಾಶ್ ಮಣಿ (26.40ಸೆ) ಮತ್ತು ಉತ್ಕರ್ಷ್ ಎಸ್ ಪಾಟೀಲ (26.79ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಮಹಿಳೆಯರ ವಿಭಾಗದಲ್ಲಿ ಬಿಎಸಿಯ ವಿಹಿತಾ ನಯನಾ (30.31ಸೆ) ಚಿನ್ನ ಗೆದ್ದರು. ಡಾಲ್ಫಿನ್‌ನ ಶಾಲಿನಿ ಆರ್.ದೀಕ್ಷಿತ್ (31.68ಸೆ) ಮತ್ತು ಗ್ಲೋಬಲ್ ಸ್ವಿಮ್ ಸೆಂಟರ್‌ನ ಶೃತಿ ಕೆ.ಆರ್. (31.92ಸೆ) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದರು.
ಫಲಿತಾಂಶ: ಪುರುಷರು: 50 ಮೀ. ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್ (ಡಾಲ್ಫಿನ್; ಕಾಲ:26.02ಸೆ)–1, ಆಕಾಶ್ ಮಣಿ–2, ಉತ್ಕರ್ಷ ಎಸ್.ಪಾಟೀಲ (ಇಬ್ಬರು ಬಿಎಸಿ)–3. 1500 ಮೀ. ಫ್ರೀಸ್ಟೈಲ್: ಅನೀಶ್ ಎಸ್.ಗೌಡ (ಕಾಲ: 16ನಿ.22.79ಸೆ), ಶಿವಾಂಕ್ ವಿಶ್ವನಾಥ್–2, ದರ್ಶನ್ ಎಸ್. (ಮೂವರು ಬಿಎಸಿ)–3. 4x100 ಮೀ. ಮೆಡ್ಲೆ ರಿಲೆ: ಬಿಎಸಿ ‘ಎ’ (ಕಾಲ: 3ನಿ.55.96ಸೆ)–1, ಡಾಲ್ಫಿನ್ ಅಕ್ವಾಟಿಕ್ಸ್–2, ಬಿಎಸಿ ‘ಬಿ’–3
ಮಹಿಳೆಯರು: 50 ಮೀ. ಬ್ಯಾಕ್‌ಸ್ಟ್ರೋಕ್: ವಿಹಿತಾ ನಯನಾ (ಬಿಎಸಿ; ಕಾಲ: 30.31ಸೆ), ಶಾಲಿನಿ ಆರ್.ದೀಕ್ಷಿತ್ (ಡಾಲ್ಫಿನ್)–2, ಶೃತಿ ಕೆ.ಆರ್. (ಗ್ಲೋಬಲ್ ಸ್ವಿಮ್ ಸೆಂಟರ್)–3. 1500 ಮೀ. ಫ್ರೀಸ್ಟೈಲ್: ತಾನ್ಯಾ ಎಸ್. (ಜೆಐಆರ್‌ಎಸ್; ಕಾಲ: 17ನಿ.59.70ಸೆ)–1, ಅದಿತಿ ಎನ್.ಮುಲೈ (ಬಿಎಸಿ)–2, ಶಿರಿನ್ (ಬಿಎಸಿ)–3. 4x100 ಮೀ. ಮೆಡ್ಲೆ ರಿಲೆ: ಬಿಎಸಿ ‘ಎ’ (ಕಾಲ: 4ನಿ.33.26ಸೆ)–1, ಡಾಲ್ಫಿನ್–2, ಗ್ಲೋಬಲ್–3.
ಸಮಗ್ರ ಪ್ರಶಸ್ತಿ: ಬಸವನಗುಡಿ ಅಕ್ವಟಿಕ್ ಸೆಂಟರ್ (541 ಅಂಕ)–1, ಡಾಲ್ಫಿನ್ ಅಕ್ವಟಿಕ್ಸ್ (209)–2.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.