ADVERTISEMENT

ಅನುಷ್ಕಾ ಬರಾಯ್‌ ಉತ್ತಮ ಪ್ರದರ್ಶನ

ಆಲ್ ಇಂಡಿಯಾ ಸಬ್ ಜ್ಯೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 14:44 IST
Last Updated 2 ಜುಲೈ 2019, 14:44 IST
ದೆಹಲಿ ಹಾಗೂ ಮುಂಬೈ ನಡುವೆ ನಡೆದ ಪಂದ್ಯದಲ್ಲಿ ಸ್ಪರ್ಧಿಗಳು ಸೆಣಸುತ್ತಿರುವುದು.ಪ್ರಜಾವಾಣಿ ಚಿತ್ರ
ದೆಹಲಿ ಹಾಗೂ ಮುಂಬೈ ನಡುವೆ ನಡೆದ ಪಂದ್ಯದಲ್ಲಿ ಸ್ಪರ್ಧಿಗಳು ಸೆಣಸುತ್ತಿರುವುದು.ಪ್ರಜಾವಾಣಿ ಚಿತ್ರ   

ಉಡುಪಿ: ಇಲ್ಲಿನ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಯೋನೆಕ್ಸ್ ಸನ್‌ರೈಸ್‌ ಆಲ್ ಇಂಡಿಯಾ ಸಬ್ ಜ್ಯೂನಿಯರ್ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ದಿನವಾದ ಮಂಗಳವಾರ ಕರ್ನಾಟಕದ ಅನುಷ್ಕಾ ಬರಾಯ್‌ ಉತ್ತಮ ಪ್ರದರ್ಶನ ನೀಡಿದರು.

13 ವರ್ಷದೊಳಗಿನವರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಮಹಾರಾಷ್ಟ್ರದ ಖುಷಿ ಸಿಂಗ್‌ ವಿರುದ್ಧ 15–3, 15–2 ಅಂತರದ ನೇರ ಸೆಟ್‌ಗಳಲ್ಲಿ ಅನುಷ್ಕಾ ಬರಾಯ್ ಗೆಲುವು ಸಾಧಿಸಿದರು.

2ನೇ ಸುತ್ತಿನಲ್ಲಿ ತಮಿಳುನಾಡಿನ ಇಯಾಜೀನ್ ವಿರುದ್ಧ 11-15 15-7 15-8 ಪಾಯಿಂಟ್ಸ್‌ಗಳೊಂದಿಗೆ ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿದರು.

ADVERTISEMENT

ಕರ್ನಾಟಕದ ಪ್ರೀತಿ ಆರ್.ರಾವ್ ಕೂಡ ಎರಡನೇ ಸುತ್ತಿನಲ್ಲಿ ಮಹಾರಾಷ್ಟ್ರದ ಅನನ್ಯ ಅಗರ್‌ವಾಲ್ ವಿರುದ್ಧ 15–11,15–4 ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು.

ಆದರೆ, ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡದಿಂದ ಉತ್ತಮ ಪ್ರದರ್ಶನ ಹೊರಹೊಮ್ಮಲಿಲ್ಲ. ಗಗನ್ ಎಸ್‌.ಗೌಡ ಉತ್ತರಾಘಂಡದ ವಂಶ್‌ ಪ್ರತಾಪ್ ಸಿಂಗ್ ವಿರುದ್ಧ ಹಾಗೂ ಪುಷ್ಕರ್ ಸಾಯಿ ಉತ್ತರ ಪ್ರದೇಶದ ಲಕ್ಷಯ್ ಗ್ರೋವರ್ ವಿರುದ್ಧ ಪರಾಭವಗೊಂಡರು.‌

ಬಾಲಕಿಯರ ಡಬಲ್ಸ್‌ನಲ್ಲಿ ರಾಜ್ಯದ ಆರಾಧನಾ ಪದಮಠ ಹಾಗೂ ಪ್ರೀತಿ ಕೆ.ರಾವ್ ಜೋಡಿ ಪುದುಚೇರಿಯ ನಸ್ರೀನ್ ಹಾಗೂ ಜನನಿಕ ಜೋಡಿಯನ್ನು 15-10 15-5 ನೇರ ಸೆಟ್‌ಗಳಿಂದ ಮಣಿಸಿತು.

ಇದೇವೇಳೆ, ರಾಜ್ಯದ ದಿಯಾ ಭೀಮಯ್ಯ, ಅಮೂಲ್ಯ ಅಭಿಲಾಶ್‌ ಕಶ್ಯಪ್‌ ಜೋಡಿ ತೆಲಂಗಾಣದ ಮಹೇಶ್ವರಿ, ಕೀರ್ತಿ ಮಂಚಾಲ ಜೋಡಿಯನ್ನು ಪರಾಭವಗೊಳಿಸಿ 2ನೇ ಸುತ್ತು ಪ್ರವೇಶಿಸಿತು.

ಟೂರ್ನಿ ಜುಲೈ 7ರವರೆಗೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.