ADVERTISEMENT

ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಷಿಪ್: ನಾಕೌಟ್‌ ತಲುಪಲು ಭಾರತ ತಂಡಗಳು ವಿಫಲ

ಪಿಟಿಐ
Published 18 ಫೆಬ್ರುವರಿ 2022, 13:11 IST
Last Updated 18 ಫೆಬ್ರುವರಿ 2022, 13:11 IST
ಮಿಥುನ್ ಮಂಜುನಾಥ್‌– ಟ್ವಿಟರ್‌ ಚಿತ್ರ
ಮಿಥುನ್ ಮಂಜುನಾಥ್‌– ಟ್ವಿಟರ್‌ ಚಿತ್ರ   

ಷಾ ಆಲಂ, ಮಲೇಷ್ಯಾ: ಭಾರತದ ಪುರುಷ ಮತ್ತು ಮಹಿಳಾ ತಂಡಗಳು ನಾಕೌಟ್‌ ಹಂತ ತಲುಪಲು ವಿಫಲವಾಗುವುದರೊಂದಿಗೆ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ದೇಶದ ಅಭಿಯಾನ ಅಂತ್ಯಗೊಂಡಿದೆ.

ಶುಕ್ರವಾರದ ಹಣಾಹಣಿಗಳಲ್ಲಿ ಪುರುಷರ ತಂಡವು 2–3ರಿಂದ ಹಾಲಿ ಚಾಂಪಿಯನ್‌ ಇಂಡೊನೇಷ್ಯಾ ಎದುರು ಎಡವಿದರೆ, ಮಹಿಳಾ ತಂಡವು 1–4ರಿಂದ ಜಪಾನ್ ಎದುರು ಮುಗ್ಗರಿಸಿತು.

ಭಾರತ ಪುರುಷರ ತಂಡದವರು ಗುಂಪು ಹಂತದಲ್ಲಿ ಮೂರನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತು.

ADVERTISEMENT

ಪುರುಷರ ವಿಭಾಗದ ಪಂದ್ಯದ ಮೊದಲ ಸಿಂಗಲ್ಸ್ ಸೆಣಸಾಟದಲ್ಲಿ ಭಾರತದ ಲಕ್ಷ್ಯ ಸೇನ್‌21-18, 27-25ರಿಂದ ಔರಾ ದ್ವಿ ವರ್ದೊಯೊ ಎದುರು ಜಯಿಸಿದರು. ಆದರೆ ಡಬಲ್ಸ್ ಜೋಡಿ ಮಂಜೀತ್ ಸಿಂಗ್‌ ಖ್ವೈರಕ್‌ಪಮ್‌– ಡಿಂಕು ಸಿಂಗ್‌ ಕೊಂಥುಜಾಮ್‌16-21, 10-21ರಿಂದ ಲಿಯೊ ರೊಲಿ ಕಾರ್ನಾಂಡೊ ಮತ್ತು ಡೇನಿಯಲ್‌ ಮಾರ್ಟಿನ್ ಎದುರು ಎಡವಿದರು.

ಕಿರಣ್‌ ಜಾರ್ಜ್‌ ವೀರೋಚಿತ ಹೋರಾಟ ತೋರಿದರೂ13-21, 21-17, 10-21ರಿಂದ ಇಕ್ಷಾನ್ ಲಿಯೊನಾರ್ಡೊ ಇಮ್ಯಾನ್ಯುಯೆಲ್‌ ರುಂಬೆ ಎದುರು ಸೋತರು. ಡಬಲ್ಸ್ ಹಣಾಹಣಿಯಲ್ಲಿಹರಿಹರನ್ ಅಸ್ಕರುಣನ್ ಮತ್ತು ರೂಬನ್ ರೆತಿನ್ ಸಭಾಪತಿ ಕುಮಾರ್10-21, 10-21ರಿಂದ ಮುಹಮ್ಮದ್ ಶೋಯಿಬುಲ್ ಫಿಕ್ರಿ ಮತ್ತು ಬಾಗಸ್‌ ಮೌಲಾನ ಅವರಿಗೆ ಮಣಿದರು. ಕೊನೆಯಲ್ಲಿ ಮಿಥುನ್ ಮಂಜುನಾಥ್21-12, 15-21, 21-17ರಿಂದ ಯೊನಾಥನ್ ರೊಮಿಲೆ ಅವರನ್ನು ಮಣಿಸಿ ಭಾರತಕ್ಕೆ ಸಮಾಧಾನಕರ ಜಯ ತಂದುಕೊಟ್ಟರು.

ಮಹಿಳೆಯರ ವಿಭಾಗದಲ್ಲಿ ಅಸ್ಮಿತಾ ಚಲಿಹಾ ಮಾತ್ರ ಸಿಂಗಲ್ಸ್ ವಿಭಾಗದಲ್ಲಿ ಜಯ ಸಾಧಿಸಿದರು. ಆದರೆ ಉಳಿದ ಆಟಗಾರ್ತಿಯರು ವೈಫಲ್ಯ ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.