ಕರ್ನಾಟಕದ ಭಾರ್ಗವ್ ಎಸ್. ಆಟದ ವೈಖರಿ
–ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ಬೆಂಗಳೂರು: ಆತಿಥೇಯ ಕರ್ನಾಟಕ ಮತ್ತು ರೈಲ್ವೇಸ್ ತಂಡಗಳು ಬುಧವಾರ ಇಲ್ಲಿ ಆರಂಭವಾದ ಯಾನೆಕ್ಸ್ ಸನ್‌ರೈಸ್ 77ನೇ ಅಂತರ ರಾಜ್ಯ, ಅಂತರ ವಲಯ ಮತ್ತು 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದವು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ)ಯ ಆತಿಥ್ಯದಲ್ಲಿ ನಡೆಯುತ್ತಿರುವ ಕೂಟದ ಸೆಮಿಫೈನಲ್ ಹಣಾಹಣಿಯಲ್ಲಿ ಕರ್ನಾಟಕ 3–1ರಿಂದ ಛತ್ತೀಸಗಢ ತಂಡವನ್ನು ಮಣಿಸಿತು.
ಕ್ವಾರ್ಟರ್ ಫೈನಲ್‌ನಲ್ಲಿ ಬೈ ಪಡೆದಿದ್ದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಸಿಂಗಲ್ಸ್‌ನಲ್ಲಿ ಸನೀತ್ ಡಿ.ಎಸ್. 14–21, 20–22ರಿಂದ ಸೋತರು. ಆದರೆ, ಎರಡನೇ ಸಿಂಗಲ್ಸ್‌ನಲ್ಲಿ ಭಾರ್ಗವ್ ಎಸ್. 21-8, 21-19ರಿಂದ ಯಶ್ ಯೋಗಿ ಅವರನ್ನು ಸೋಲಿಸಿದ್ದರಿಂದ ತಂಡಗಳ ಸ್ಕೋರ್ 1–1 ಸಮನಾಯಿತು.
ನಂತರದಲ್ಲಿ ನಿಕೋಲಸ್ ನಾಥನ್ ರಾಜ್ ಮತ್ತು ತುಷಾರ್ ಸುವೀರ್ ಜೋಡಿಯು 21-18, 21-15ರಿಂದ ಇಶಾನ್ ಭಟ್‌ನಗರ್ ಮತ್ತು ಆಯುಷ್ ಮಖಿಜಾ ಅವರನ್ನು ಸೋಲಿಸಿತು. ಕೊನೆಯ ಸಿಂಗಲ್ಸ್‌ನಲ್ಲಿ ರಘು ಎಂ. 21–10, 21–8ರಿಂದ ಹರ್ಷಿತ್ ಠಾಕೂರ್ ಅವರನ್ನು ಸೋಲಿಸಿ ಕರ್ನಾಟಕದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಮತ್ತೊಂದು ಸೆಮಿಫೈನಲ್‌ನಲ್ಲಿ ರೈಲ್ವೇಸ್ ತಂಡವು 3–0ಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಂಡವನ್ನು ಮಣಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ರೈಲ್ವೇಸ್ 3–0ಯಿಂದ ರಾಜಸ್ಥಾನವನ್ನು; ಛತ್ತೀಸಗಢ 3–1ರಿಂದ ಉತ್ತರಾಖಂಡವನ್ನು; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 3–0ಯಿಂದ ಅರುಣಾಚಲ ಪ್ರದೇಶವನ್ನು ಸೋಲಿಸಿತು.
ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಹರಿಯಾಣ ಮತ್ತು ಗುಜರಾತ್ ತಂಡಗಳು ಫೈನಲ್ ಪ್ರವೇಶಿಸಿದವು. ಹರಿಯಾಣ 3–0ಯಿಂದ ರೈಲ್ವೇಸ್ ವಿರುದ್ಧ; ಗುಜರಾತ್ 3–1ರಿಂದ ಉತ್ತರಾಖಂಡ ವಿರುದ್ಧ ಗೆಲುವು ಸಾಧಿಸಿತು.
ಕ್ವಾರ್ಟರ್ ಫೈನಲ್‌ನಲ್ಲಿ ಹರಿಯಾಣ 3–2ರಿಂದ ಕರ್ನಾಟಕದ ಎದುರು; ಉತ್ತರಾಖಂಡ 3–1ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎದುರು; ಗುಜರಾತ್ 3–1ರಿಂದ ಅಸ್ಸಾಂ ಎದುರು ಗೆದ್ದಿತ್ತು. ರೈಲ್ವೇಸ್ ತಂಡ ಬೈ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.