ADVERTISEMENT

ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಮುಖ್ಯ ಸುತ್ತಿಗೆ ಕಶ್ಯಪ್‌, ಮುಗ್ಧಾ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:02 IST
Last Updated 9 ಏಪ್ರಿಲ್ 2019, 16:02 IST
ಪರುಪಳ್ಳಿ ಕಶ್ಯಪ್‌
ಪರುಪಳ್ಳಿ ಕಶ್ಯಪ್‌   

ಸಿಂಗಪುರ: ಭಾರತದ ಪರುಪಳ್ಳಿ ಕಶ್ಯಪ್‌ ಮತ್ತು ಮುಗ್ಧಾ ಅಗ್ರೇಯ ಅವರು ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಕಶ್ಯಪ್‌, ಮಂಗಳವಾರ ನಡೆದ ಅರ್ಹತಾ ಸುತ್ತಿನ ಎರಡು ಪಂದ್ಯಗಳಲ್ಲೂ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಕಶ್ಯಪ್‌ 21–5, 14–21, 21–17ರಲ್ಲಿ ಮಲೇಷ್ಯಾದ ಜೂನ್‌ ವೀ ಚೀಮ್‌ ಅವರನ್ನು ಸೋಲಿಸಿದರು.

ADVERTISEMENT

ನಂತರದ ಹೋರಾಟದಲ್ಲಿ ಭಾರತದ ಆಟಗಾರ 15–21, 21–16, 22–20ರಲ್ಲಿ ಜಪಾನ್‌ನ ಯೂ ಇಗಾರಶಿ ಅವರನ್ನು ಮಣಿಸಿದರು.

ಬುಧವಾರ ನಡೆಯುವ ಪ್ರಧಾನ ಹಂತದ ಮೊದಲ ಪಂದ್ಯದಲ್ಲಿ ಕಶ್ಯಪ್‌, ಡೆನ್ಮಾರ್ಕ್‌ನ ರಸ್ಮಸ್‌ ಗೆಮ್ಕೆ ಎದುರು ಸೆಣಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಮುಗ್ಧಾ 16–21, 21–14, 21–15ರಲ್ಲಿ ಅಮೆರಿಕದ ಲೌರೆನ್‌ ‍ಲ್ಯಾಮ್‌ ಎದುರು ಗೆದ್ದರು.

ಮುಖ್ಯ ಸುತ್ತಿನ ಮೊದಲ ಪೈಪೋಟಿಯಲ್ಲಿ ಮುಗ್ಧಾ, ಥಾಯ್ಲೆಂಡ್‌ನ ಪೊರ್ನ್‌ಪಾವೀ ಚೊಚುವೊಂಗ್ ಎದುರು ಆಡಲಿದ್ದಾರೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಎಂ.ಆರ್‌.ಅರ್ಜುನ್‌ ಮತ್ತು ಶ್ಲೋಕ್‌ ರಾಮಚಂದ್ರನ್‌ ಅವರು ಅರ್ಹತಾ ಸುತ್ತಿನಲ್ಲೇ ಮುಗ್ಗರಿಸಿದರು.

ಮೊದಲ ಸುತ್ತಿನ ಹಣಾಹಣಿಯಲ್ಲಿ ಅರ್ಜುನ್‌ ಮತ್ತು ಶ್ಲೋಕ್‌ 11–21, 18–21ರಲ್ಲಿ ಡೆನ್ಮಾರ್ಕ್‌ನ ಆರನೇ ಶ್ರೇಯಾಂಕದ ಜೋಡಿ ಕಿಮ್‌ ಆ್ಯಸ್ಟ್ರಪ್‌ ಮತ್ತು ಆ್ಯಂಡ್ರೆಸ್‌ ಸಾಕ್ರಪ್‌ ರಸ್ಮಸನ್‌ ಎದುರು ಸೋತರು.

ನರೇಂದ್ರನ್‌ ಬಾಲಸುಬ್ರಮಣಿಯನ್‌ ಮತ್ತು ರಫೆಲ್‌ ಶರೊನ್‌ 15–21, 14–21ರಲ್ಲಿ ಡ್ಯಾನಿ ಬಾವಾ ಕ್ರಿಸ್‌ನಾಂಟ ಮತ್ತು ಲೊಹ್‌ ಕೀನ್ ಹೀನ್‌ ಎದುರು ಪರಾಭವಗೊಂಡರು.

ಬುಧವಾರದ ಪಂದ್ಯಗಳಲ್ಲಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಕಣಕ್ಕಿಳಿಯಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ‍ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.