ADVERTISEMENT

ಬ್ಯಾಡ್ಮಿಂಟನ್‌: ಪ್ರಧಾನ ಹಂತಕ್ಕೆ ಪ್ರಿಯಾಂಶು

ಬ್ಯಾಡ್ಮಿಂಟನ್‌: ಸ್ಪೇನ್‌ ಮಾಸ್ಟರ್ಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:18 IST
Last Updated 28 ಮಾರ್ಚ್ 2023, 19:18 IST
ಪ್ರಿಯಾಂಶು ರಾಜಾವತ್‌
ಪ್ರಿಯಾಂಶು ರಾಜಾವತ್‌   

ಮ್ಯಾಡ್ರಿಡ್‌ (ಪಿಟಿಐ): ಭಾರತದ ಪ್ರಿಯಾಂಶು ರಾಜಾವತ್‌ ಅವರು ಇಲ್ಲಿ ನಡೆಯುತ್ತಿರುವ ಸ್ಪೇನ್‌ ಮಾಸ್ಟರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಧಾನ ಹಂತ ಪ್ರವೇಶಿಸಿದರು.

ಮಂಗಳವಾರ ನಡೆದ ಅರ್ಹತಾ ಸುತ್ತಿನ ಎರಡೂ ಪಂದ್ಯಗಳನ್ನು ಅವರು ಗೆದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 60ನೇ ಸ್ಥಾನದಲ್ಲಿರುವ ಅವರು ಮೊದಲ ಹಣಾಹಣಿಯಲ್ಲಿ 21–16, 21–12 ರಲ್ಲಿ ಎಲ್‌ಸಾಲ್ವಡರ್‌ನ ಯುರೆಲ್ ಫ್ರಾನ್ಸಿಸ್ಕೊ ಅವರನ್ನು ಮಣಿಸಿದರು.

ಎರಡನೇ ಪಂದ್ಯದಲ್ಲಿ 21-18, 18-21, 21-15 ರಲ್ಲಿ ಫ್ರಾನ್ಸ್‌ನ ಅಲೆಕ್ಸ್‌ ಲೇನಿಯೆರ್‌ ವಿರುದ್ಧ ಗೆದ್ದರು. ಮೊದಲ ಗೇಮ್ ಗೆದ್ದ ಪ್ರಿಯಾಂಶು, ಎರಡನೇ ಗೇಮ್‌ ಸೋತರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಲಯ ಕಂಡುಕೊಂಡು ಪಂದ್ಯ ತಮ್ಮದಾಗಿಸಿಕೊಂಡರು. ಈ ಜಿದ್ದಾಜಿದ್ದಿನ ಹೋರಾಟ 1 ಗಂಟೆ 3 ನಿಮಿಷ ನಡೆಯಿತು.

ADVERTISEMENT

ಎಂ.ಆರ್‌.ಅರ್ಜುನ್‌ ಮತ್ತು ಧ್ರುವ್‌ ಕಪಿಲಾ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಪ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಅವರು ಮೊದಲ ಸುತ್ತಿನಲ್ಲಿ 16–21, 21–17, 21–12 ರಲ್ಲಿ ಕ್ರಿಸ್ಟೋಫರ್‌ ಗ್ರಿಮ್ಲೆ ಮತ್ತು ಮ್ಯಾಥ್ಯೂ ಗ್ರಿಮ್ಲೆ ಸಹೋದರರನ್ನು ಮಣಿಸಿದರು.

ಮೆರಾಬಾ ಲುವಾಂಗ್‌ ಮೈಸ್‌ನಮ್ 14–21, 22–20, 19–21 ರಲ್ಲಿ ಅಲೆಕ್ಸ್‌ ಲೇನಿಯೆರ್‌ ಎದುರು ಸೋತು ಹೊರಬಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸ್ಪರ್ಧಿಗಳು ಪ್ರಧಾನ ಸುತ್ತು ಪ್ರವೇಶಿಸಲು ವಿಫಲರಾದರು. ರೋಹನ್‌ ಕಪೂರ್‌– ಎನ್‌.ಸಿಕ್ಕಿ ರೆಡ್ಡಿ 12-21, 22-20, 19-21 ರಲ್ಲಿ ಇಂಡೊನೇಷ್ಯಾದ ಅಮ್ರಿ ಸಾಹ್ನವಿ– ವಿನ್ನಿ ಒಕ್ಟೇವಿನಾ ಎದುರು ಪರಾಭವಗೊಂಡರು.

ಬಿ.ಸುಮೀತ್‌ ರೆಡ್ಡಿ– ಅಶ್ವಿನಿ ಪೊನ್ನಪ್ಪ ಜೋಡಿ 17-21, 21-19, 13-21 ರಲ್ಲಿ ಚೀನಾದ ಹೆ ಜಿ ತಾಂಗ್‌– ದು ಯುಯಿ ಎದುರು ಸೋತಿತು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಸಿಮ್ರಾನ್‌ ಸಿಂಘಿ– ರಿತಿಕಾ ಥಾಕರ್‌ 11–21, 19–21 ರಲ್ಲಿ ಡೆನ್ಮಾರ್ಕ್‌ನ ನತಾಶಾ ಅಂಥೋನಿಸೆನ್‌– ಕ್ಲಾರಾ ಗ್ರಾವರ್ಸೆನ್‌ ಎದುರು ಪರಾಭವಗೊಂಡರು.

ಕೆ.ಶ್ರೀಕಾಂತ್‌, ಎಚ್.ಎಚ್‌.ಪ್ರಣಯ್‌, ಬಿ.ಸಾಯಿ ಪ್ರಣೀತ್‌ ಮತ್ತು ಪಿ.ವಿ. ಸಿಂಧು ಅವರು ಬುಧವಾರ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.