ADVERTISEMENT

ಬ್ಯಾಡ್ಮಿಂಟನ್‌ನಿಂದಲೇ ಬದುಕು ಕಟ್ಟಿಕೊಂಡ ರವೀಂದ್ರ ನಾಗರಾಜ ಶಾನಭಾಗ

ಬೆಂಗಳೂರಿನಲ್ಲಿ ತರಬೇತುದಾರರಾಗಿರುವ ಸಿದ್ದಾಪುರದ ರವೀಂದ್ರ

ರವೀಂದ್ರ ಭಟ್ಟ, ಬಳಗುಳಿ
Published 11 ಜೂನ್ 2019, 19:30 IST
Last Updated 11 ಜೂನ್ 2019, 19:30 IST
ಟೂರ್ನಿಯೊಂದರಲ್ಲಿ ರವೀಂದ್ರ ಶಾನಭಾಗ
ಟೂರ್ನಿಯೊಂದರಲ್ಲಿ ರವೀಂದ್ರ ಶಾನಭಾಗ   

ಸಿದ್ದಾಪುರ: ಕ್ರೀಡಾಸಕ್ತಿ ಹೊಂದಿದ್ದರೂ ಕ್ರೀಡೆಯನ್ನೇ ಬದುಕಿನ ದಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳುವವರು ವಿರಳ. ಪಟ್ಟಣದ ರವೀಂದ್ರ ನಾಗರಾಜ ಶಾನಭಾಗ ಇದಕ್ಕೆ ಅಪವಾದವಾಗಿದ್ದಾರೆ. ಅವರು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿಯೇ ಬದುಕು ಕಂಡುಕೊಂಡಿದ್ದಾರೆ.

ರವೀಂದ್ರ ಶಾನಭಾಗ ಪಟ್ಟಣದ ನಾಗರಾಜ ಶಾನಭಾಗ ಮತ್ತು ಅಶ್ವಿನಿ ಶಾನಭಾಗ ದಂಪತಿಯ ಪುತ್ರ. ಬ್ಯಾಡ್ಮಿಂಟನ್ ಕ್ರೀಡೆಯ ತರಬೇತಿ ಮತ್ತು ಅಂಪೈರಿಂಗ್ ಅವರ ಕಾರ್ಯಕ್ಷೇತ್ರ. ಪ್ರಸ್ತುತ ಬೆಂಗಳೂರಿನಲ್ಲಿ ತರಬೇತುದಾರರಾಗಿರುವ ಅವರು, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ನಿರ್ಣಾಯಕರ ಕೆಲಸ ಮಾಡುತ್ತಿದ್ದಾರೆ.

ಬಿ.ಕಾಂ, ಬಿ.ಪಿ.ಇಡಿ, ಎಂ.ಪಿ.ಇಡಿ ಪದವಿ ಪಡೆದಿರುವ ರವೀಂದ್ರ, ಶಿರಸಿಯ ಕಾಲೇಜೊಂದರಲ್ಲಿ ಕ್ರೀಡಾ ಶಿಕ್ಷಕರ ನೌಕರಿ ದೊರೆತರೂ ಅದನ್ನು ಬಿಟ್ಟರು. ಬ್ಯಾಡ್ಮಿಂಟನ್ ತರಬೇತಿಯನ್ನೇ ಬದುಕಿಗಾಗಿ ಆಯ್ಕೆ ಮಾಡಿಕೊಂಡರು. ಈ ಕ್ರೀಡೆಯ ಕುರಿತು ಪ್ರಾಥಮಿಕ ಪಾಠಗಳನ್ನು ಸಾಗರದ ಜಯರಾಮ ಪೈ ಅವರಿಂದ ಪಡೆದರು. ನಂತರ ಶಿರಸಿಯಲ್ಲಿ ಆಸಕ್ತರಿಗೆ ಬ್ಯಾಡ್ಮಿಂಟನ್ ತರಬೇತಿ ನೀಡಲು ಆರಂಭಿಸಿದರು. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಅದೇ ವೃತ್ತಿ ಮುಂದುವರಿಸಿದ್ದಾರೆ. ಈವರೆಗೆ ಅವರು ನೂರಾರು ಯುವಕರಿಗೆ ಬ್ಯಾಡ್ಮಿಂಟನ್ ತರಬೇತಿ ನೀಡಿದ್ದಾರೆ. ಅವರಿಂದ ತರಬೇತಿ ಪಡೆದವರಲ್ಲಿ 10–12 ಜನ ರಾಜ್ಯ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.

ADVERTISEMENT

2012ರಲ್ಲಿ ಬ್ಯಾಡ್ಮಿಂಟನ್‌ನ ಗ್ರೇಡ್ 2 ಅಂಪೈರಿಂಗ್ ಪರೀಕ್ಷೆಯಲ್ಲಿ ಪಾಸಾಗಿದ್ದರು. 2014ರಲ್ಲಿ ಹರಿಯಾಣದ ರೋಟಕ್‌ನಲ್ಲಿ ನಡೆದ ಗ್ರೇಡ್ 1 ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.ಈ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ಗ್ರೇಡ್ 1 ಅಂಪೈರ್ ಪರೀಕ್ಷೆ ಪಾಸಾದ ದಾಖಲೆ ಅವರದ್ದಾಯಿತು.

ಈವರೆಗೆ 15 ರಾಷ್ಟ್ರಮಟ್ಟದ ಹಾಗೂ 30 ರಾಜ್ಯಮಟ್ಟದ ಟೂರ್ನಿಗಳಲ್ಲಿ ಅಂಪೈರ್ ಆಗಿರುವ ಅವರು, ನವದೆಹಲಿಯಲ್ಲಿ ಇಂಡಿಯನ್ ಓಪನ್ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ಎರಡು ಬಾರಿ ತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. 2017ರಲ್ಲಿ ಹೈದ್ರಾಬಾದ್‌ನಲ್ಲಿ ನಡೆದಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಅಂಪೈರ್ ಆಗಿದ್ದರು.2018ರಲ್ಲಿ ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಬರುವ ಟೂರ್ನಿಗಳಲ್ಲಿ ಅಂಪೈರ್:ಜೂನ್ 12ರಿಂದ 17ರವರೆಗೆ ಬೆಂಗಳೂರು ನ್ಯಾಷನಲ್‌ ಟೂರ್ನಿಯಲ್ಲಿ ಮತ್ತು ಜುಲೈ 2ರಿಂದ 7ರವರೆಗೆ ಕೇರಳದ ಕೊಚ್ಚಿಯಲ್ಲಿ ನಡೆಯುವ ರಾಷ್ಟ್ರೀಯಟೂರ್ನಿಯಲ್ಲಿ ರವೀಂದ್ರ ಶಾನಭಾಗ ಭಾಗವಹಿಸಲಿದ್ದಾರೆ.

‘ಬದುಕಿಗಾಗಿ ಕ್ರೀಡೆಯನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತೋಷವಿದೆ. ಈ ಕ್ಷೇತ್ರದಲ್ಲಿಯೇ ಹೆಚ್ಚಿನ ಸಾಧನೆ ಮಾಡುವ ಬಯಕೆ ಹೊಂದಿದ್ದೇನೆ’ ಎಂದು ಅವರು ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.