ADVERTISEMENT

ಕೊರಿಯಾ ಓಪನ್ ಬ್ಯಾಡ್ಮಿಂಟನ್: ಪ್ರೀಕ್ವಾರ್ಟರ್‌ ಫೈನಲ್‌ಗೆ ಸಿಂಧು, ಶ್ರೀಕಾಂತ್‌

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಾತ್ವಿಕ್‌– ಚಿರಾಗ್‌ ಜಯಭೇರಿ

ಪಿಟಿಐ
Published 6 ಏಪ್ರಿಲ್ 2022, 13:12 IST
Last Updated 6 ಏಪ್ರಿಲ್ 2022, 13:12 IST
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ   

ಸಂಚಿಯೊನ್‌: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಕೊರಿಯಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಪಾಲ್ಮಾ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಬುಧವಾರ ಸಿಂಧು21-15, 21-14ರಿಂದ ಅಮೆರಿಕದ ಲಾರೆನ್ ಲ್ಯಾಮ್ ಅವರನ್ನು ಪರಾಭವಗೊಳಿಸಿದರು.

ಮೊದಲ ಗೇಮ್‌ನ ಆರಂಭದಲ್ಲಿ 7–2ರಿಂದ ಮುನ್ನಡೆ ಸಾಧಿಸುವ ಮೂಲಕ ಸಿಂಧು ಹಿಡಿತ ಸಾಧಿಸಿದರು. ಒಂದು ಹಂತದಲ್ಲಿ ಈ ಮುನ್ನಡೆಯನ್ನು 16–9ಕ್ಕೆ ಕೊಂಡೊಯ್ದ ಅವರು ಸುಲಭವಾಗಿ ಗೇಮ್ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಗೇಮ್‌ನ ಆರಂಭದಲ್ಲೂ ಉಭಯ ಆಟಗಾರ್ತಿಯರ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಡೆಯಿತು. ವಿರಾಮದ ವೇಳೆಗೆ ಸಿಂಧು ಒಂದು ಪಾಯಿಂಟ್‌ನಿಂದ ಮುನ್ನಡೆಯಲ್ಲಿದ್ದರು. ಬಳಿಕ ಸತತ ಆರು ಪಾಯಿಂಟ್ಸ್ ಕಲೆಹಾಕುವುದರೊಂದಿಗೆ ಗೇಮ್ ಹಾಗೂ ಪಂದ್ಯ ಗೆದ್ದ ಸಂತಸದಲ್ಲಿ ತೇಲಿದರು.

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಸಿಂಧು, ಮುಂದಿನ ಪಂದ್ಯದಲ್ಲಿ ಜಪಾನ್‌ನ ಆಯಾ ಒಹೊರಿ ಅವರನ್ನು ಎದುರಿಸುವರು.

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ 22–20, 21–11ರಿಂದ ಮಲೇಷ್ಯಾದ ಡಾರೆನ್‌ ಲೀವ್ ಅವರನ್ನು ಮಣಿಸಿದರು.

ಐದನೇ ಶ್ರೇಯಾಂಕದ ಶ್ರೀಕಾಂತ್‌ ಇಸ್ರೇಲ್‌ನ ಮಿಶಾ ಜಿಲ್ಬರ್‌ಮನ್‌ ಅವರಿಗೆ ಮುಖಾಮುಖಿಯಾಗುವರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ಶೆಟ್ಟಿ, ಎಂ.ಆರ್‌. ಅರ್ಜುನ್‌– ಧ್ರುವ ಕಪಿಲ ಜೋಡಿಗಳು ಎರಡನೇ ಸುತ್ತು ಪ್ರವೇಶಿಸಿದವು. ಸಾತ್ವಿಕ್–ಚಿರಾಗ್‌21-16, 21-15ರಿಂದ ಕೊರಿಯಾದ ಟೇ ಯಾಂಗ್‌ ಶಿನ್‌ ಮತ್ತು ವಾಂಗ್ ಚಾನ್‌ ಅವರನ್ನು ಪರಾಭವಗೊಳಿಸಿದರು. ಅರ್ಜುನ್‌– ಧ್ರುವಗೆ ವಾಕ್‌ಓವರ್ ಲಭಿಸಿತು.

ಮಹಿಳಾ ಸಿಂಗಲ್ಸ್ ಹಣಾಹಣಿಯಲ್ಲಿ ಶ್ರೀಕೃಷ್ಣಪ್ರಿಯಾ ಕುದರವಳ್ಳಿ 5–21, 13–21ರಿಂದ ಕೊರಿಯಾದ ಆ್ಯನ್ ಸೆಯುಂಗ್ ಎದುರು ಎಡವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.