ADVERTISEMENT

Arctic Open: ತರುಣ್‌ಗೆ ಗೆಲುವು; ಲಕ್ಷ್ಯ ನಿರ್ಗಮನ

ಪಿಟಿಐ
Published 8 ಅಕ್ಟೋಬರ್ 2025, 16:19 IST
Last Updated 8 ಅಕ್ಟೋಬರ್ 2025, 16:19 IST
<div class="paragraphs"><p>ಲಕ್ಷ್ಯ ಸೇನ್‌&nbsp;</p></div>

ಲಕ್ಷ್ಯ ಸೇನ್‌ 

   

ವಂಟಾ (ಫಿನ್ಲೆಂಡ್‌): ಅಷ್ಟೇನೂ ಅನುಭವಿಯಲ್ಲದ ತರುಣ್ ಮನ್ನೇಪಲ್ಲಿ ಅವರು ಆರ್ಕ್ಟಿಕ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಹಿನ್ನಡೆಯಿಂದ ಚೇತರಿಸಿ 14ನೇ ಕ್ರಮಾಂಕದ ಟೋಮಾ ಜೂನಿಯರ್ ಪೊಪೊವ್ ಅವರಿಗೆ ಆಘಾತ ನೀಡಿದರು. ಆದರೆ ಬುಧವಾರ ನಡೆದ ಇನ್ನೊಂದು ಪಂದ್ಯದಲ್ಲಿ ಲಕ್ಷ್ಯ ಸೇನ್‌ ಸೋತರು. ಈ ವರ್ಷ ಹತ್ತನೇ ಬಾರಿ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದಂತಾಗಿದೆ.

ವಿಶ್ವ ಕ್ರಮಾಂಕದಲ್ಲಿ 46ನೇ ಸ್ಥಾನದಲ್ಲಿರುವ ಮನ್ನೇಪಲ್ಲಿ 68 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ 11–21, 21–11, 22–20 ರಿಂದ ಫ್ರಾನ್ಸ್‌ನ ಪೊಪೊವ್ ಅವರನ್ನು ಸೋಲಿಸಿದರು. ಅಂತಿಮ ಗೇಮ್‌ನಲ್ಲಿ ಅವರು ನಾಲ್ಕು ಸಲ ಮ್ಯಾಚ್‌ ಪಾಯಿಂಟ್‌ ಉಳಿಸಿಕೊಂಡರು.

ADVERTISEMENT

ಬಿಡಬ್ಲ್ಯುಎಫ್‌ ಸೂಪರ್ 500 ಮಟ್ಟದ ಈ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಮನ್ನೇಪಲ್ಲಿ ಅವರು 18ನೇ ಕ್ರಮಾಕದ ಕೊಕೊ ವತಾನಬೆ (ಜಪಾನ್‌) ಅವರನ್ನು ಎದುರಿಸಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 11ನೇ ಸ್ಥಾನದಲ್ಲಿರುವ ಹಾಗೂ ಇಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಕೊಡೈ ನರವೊಕಾ (ಜಪಾನ್‌) ಇನ್ನೊಂದು ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರನ್ನು ಹಿಮ್ಮೆಟ್ಟಿಸಿದರು. ಪ್ಯಾರಿಸ್‌ ಒಲಿಂಪಿಕ್ಸ್ ಸೆಮಿಫೈನಲ್ ತಲುಪಿದ್ದ ಲಕ್ಷ್ಯ ಅವರಿಗೆ ಇದು ನರವೋಕಾ ಎದುರು ಎಂಟು ಪಂದ್ಯಗಳಲ್ಲಿ ಆರನೇ ಸೋಲು.

ಭಾರತದ ಇತರ ಆಟಗಾರರ ಸವಾಲು ಅಂತ್ಯಗೊಂಡಿತು. ಕಿಡಂಬಿ ಶ್ರಿಕಾಂತ್ ಅವರು ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಅವರಿಗೆ ವಾಕ್‌ ಓವರ್‌ ನೀಡಿದರೆ, ಕಿರಣ್ ಜಾರ್ಜ್ ಅವರು 10–21, 1–4 ಹಿನ್ನಡೆಯಲ್ಲಿದ್ದಾಗ ಕೋಕಿ ವತಾನಬೆ ಅವರಿಗೆ ಪಂದ್ಯ ಬಿಟ್ಟುಕೊಟ್ಟರು.

ಶಂಕರ್ ಸುಬ್ರಮಣಿಯನ್ 17–21, 11–21ರಲ್ಲಿ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್‌ ಅವರಿಗೆ 44 ನಿಮಿಷಗಳಲ್ಲಿ ಮಣಿದರೆ, ಆಯುಷ್‌ ಶೆಟ್ಟಿ 15–21, 16–21ರಲ್ಲಿ ಅಗ್ರ ಶ್ರೇಯಾಂಕದ ಕುನ್ಲಾವುತ್‌ ವಿತಿದ್‌ಸರ್ನ್ (ಥಾಯ್ಲೆಂಡ್) ಎದುರು ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.