
ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್‌ನಲ್ಲಿ ಕರ್ನಾಟಕದ ನೆಯ್ಸಾ ಕಾರ್ಯಪ್ಪ - ಎ ಅನಘ ಅರವಿಂದ ಪೈ ಜೋಡಿಯು ರೀವಾ ಇವ್ಯಾಂಜಲಿನ್–ಸಮೃದ್ಧಿ ಸಿಂಗ್ ಜೋಡಿಯನ್ನು 21–11, 21–15 ರಿಂದ ಮಣಿಸಿ ಗುರುವಾರ ಕ್ವಾರ್ಟರ್ ಫೈನಲ್ ತಲುಪಿತು
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು: ಕರ್ನಾಟಕದ ತುಷಾರ್ ಸುವೀರ್, ಸನೀತ್ ದಯಾನಂದ ಹಾಗೂ ರುಜುಲಾ ರಾಮು ಅವರು ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್ ಫೈನಲ್ ತಲುಪಿದರು.
ತುಷಾರ್ ಮತ್ತು ಸನೀತ್ ಪುರುಷರ ಸಿಂಗಲ್ಸ್‌ನಲ್ಲಿ, ರುಜುಲಾ ರಾಮು ಮಹಿಳೆಯರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ತಲುಪಿದರು.
ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಸನೀತ್ 21–16, 21–9ರಿಂದ ಊರ್ಜಿತ್ ಛಾಲಿಯಾ ವಿರುದ್ಧ ಜಯಗಳಿಸಿದರು. 12ನೇ ಶ್ರೇಯಾಂಕದ ತುಷಾರ್ 21–16, 21–10 ರಿಂದ ನಿಕೋಲಸ್ ರಾಜ್ ಅವರನ್ನು ಹಿಮ್ಮೆಟ್ಟಿಸಿದರು.
ಅಗ್ರ ಶ್ರೇಯಾಂಕದ ಋತ್ವಿಕ್ ಸಂಜೀವಿ ಸತೀಶ್ ಕುಮಾರ್ 21–13, 21–12ರಲ್ಲಿ ಪ್ರಣಯ್ ಕಟ್ಟಾ ಅವರನ್ನು ಮಣಿಸಿದರು. ಆರ್ಯಮಾನ್ ಟಂಡನ್ ಮೂರು ಗೇಮ್‌ಗಳ ಪಂದ್ಯದಲ್ಲಿ 12–21, 21–15, 21–14ರಿಂದ ನುಮೇರ್ ಶೇಖ್‌ಗೆ ಸೋಲುಣಿಸಿದರು.
ಎ.ಆರ್. ರೋಹನ್ ಕುಮಾರ್ 17–21, 21–9, 21–13ರಿಂದ ಕೆನಡಾದ ಶೌರ್ಯ ಗುಲ್ಲಯ್ಯ ವಿರುದ್ಧ; ಪ್ರಣಯ್ ಶೆಟ್ಟಿಗಾರ್ 21–17, 21–17 ರಿಂದ ಶಿವಾಂಶ್ ವಿರುದ್ಧ ಪ್ರಾಬಲ್ಯ ಮೆರೆದರು.
ಅಂಶ್ ವಿಶಾಲ್ ಗುಪ್ತ 21–18, 21–17, 30–29 ರಿಂದ ವರುಣ್ ಕಪೂರ್ ಅನ್ನು ಮಣಿಸಿದರು. ರೌನಕ್ ಚೌಹಾನ್ 21–17, 15–21, 23–21ರಿಂದ ಭರತ್ ರಾಘವ್ ವಿರುದ್ಧ ಗೆಲುವಿನ ನಗೆ ಬೀರಿದರು.
ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ರುಜುಲಾ ರಾಮು 21–20, 21–19 ರಿಂದ ಆರನೇ ಶ್ರೇಯಾಂಕದ ಅದಿತಾ ರಾವ್ ಅವರನ್ನು ಸೋಲಿಸಿದರು. ಅಗ್ರ ಶ್ರೇಯಾಂಕದ ಇಷಿಕಾ ಜೈಸ್ವಾಲ್ (ಅಮೆರಿಕ) ಗೆಲುವಿನ ಓಟ ಮುಂದುವರಿಸಿದ್ದು, ಡಯಾಂಕ್ ವಾಲ್ಡಿಯಾ ಅವರನ್ನು 21–10, 21–15 ರಿಂದ ಮಣಿಸಿದರು. ತನ್ವಿ ಪಟ್ರಿ 21–15, 21–15ರಿಂದ ನವ್ಯಾ ಖಂಡೇರಿ ವಿರುದ್ಧ ಗೆದ್ದರು.
ಮಾನ್ಸಿ ಸಿಂಗ್ 21–14, 21–8 ರಿಂದ ಐಕ್ಯಾ ಶೆಟ್ಟಿ ವಿರುದ್ಧ; ಆಶ್ಮಿತಾ ಛಾಲಿಹಾ 21–13, 21–14ರಿಂದ ಮೇಧವಿ ನಗರ್ ವಿರುದ್ಧ ಗೆಲುವು ಸಾಧಿಸಿದರು.
ದಿಶಾ ಸಂತೋಷ್ 13–21, 11–21ರಿಂದ ಮೇಘನಾ ರೆಡ್ಡಿ ಮರೆಡ್ಡಿ ವಿರುದ್ಧ; ಆಲಿಷಾ ನಾಯ್ಕ್ 12–21, 21–21ರಿಂದ ಸೂರ್ಯ ಚರಿಷ್ಮಾ ತಮಿರಿ ವಿರುದ್; ಪ್ರಶಂಸಾ ಬೋನಮ್ 12–21, 22–20, 18–21ರಿಂದ ಶ್ರೇಯಾ ಲೇಲೆ ವಿರುದ್ಧ ಸೋಲನುಭವಿಸಿದರು.
ಕರ್ನಾಟಕದ ರಶ್ಮಿ ಗಣೇಶ್–ಸಾನಿಯಾ ಸಿಕಂದರ್, ನೆಯ್ಸಾ ಕಾರ್ಯಪ್ಪ–ಎ.ಅನಘಾ ಅರವಿಂದ ಪೈ, ಅಶ್ವಿನಿ ಭಟ್ –ಶಿಖಾ ಗೌತಮ್ ಜೋಡಿಗಳು ಮಹಿಳೆಯರ ಡಬಲ್ಸ್‌ನಲ್ಲಿ ಎಂಟರ ಘಟ್ಟ ತಲುಪಿದವು.
ಡಬಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ನೆಯ್ಸಾ –ಎ ಅನಘಾ ಪೈ ಜೋಡಿ 21–11, 21–15ರಿಂದ ರೀವಾ ಇವ್ಯಾಂಜಲಿನ್–ಸಮೃದ್ಧಿ ಸಿಂಗ್ ಜೋಡಿಯನ್ನು ಮಣಿಸಿತು. ಎಂಟನೇ ಶ್ರೇಯಾಂಕದ ರಶ್ಮಿ ಗಣೇಶ್– ಸಾನಿಯಾ ಜೋಡಿಯು 16–21, 21–14, 21–14ರಿಂದ ವಿ.ಆರ್.ನರ್ಧನ– ಋದ್ವರ್ಷಿಣಿ ರಾಮಸಾಮಿ ಜೋಡಿಯನ್ನು ಸೋಲಿಸಿತು. ಮೂರನೇ ಶ್ರೇಯಾಂಕದ ಅಶ್ವಿನಿ ಭಟ್– ಶಿಖಾ ಗೌತಮ್ ಜೋಡಿಯು 21–9, 21–19 ರಿಂದ ಸಿಂಗಪುರದ ಕ್ಸಿಯಾವೊ ಎನ್ ಹೆಂಗ್– ಜಿನ್ ಯು ಜಿಯಾ ಜೋಡಿಯನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.