ADVERTISEMENT

ಬ್ಯಾಡ್ಮಿಂಟನ್‌: ದೇಶದಲ್ಲಿ ಎರಡು ಅಂತರರಾಷ್ಟ್ರೀಯ ಚಾಲೆಂಜರ್ ಟೂರ್ನಿಗಳ ಆಯೋಜನೆ

30 ಕೋಚ್‌ಗಳ ನೇಮಕ: ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ ನಿರ್ಧಾರ

ಪಿಟಿಐ
Published 17 ಮೇ 2022, 11:33 IST
Last Updated 17 ಮೇ 2022, 11:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 2028ರ ಪ್ಯಾರಿಸ್‌ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ವರ್ಷದಲ್ಲಿ ಎರಡು ಬಿಡಬ್ಲ್ಯುಎಫ್‌ ಅಂತರರಾಷ್ಟ್ರೀಯ ಚಾಲೆಂಜರ್‌ ಟೂರ್ನಿಗಳ ಆಯೋಜನೆ, 30 ಕೋಚ್‌ಗಳ ನೇಮಕ ಮತ್ತು 11 ವರ್ಷದೊಳಗಿನವರಿಗಾಗಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ನಡೆಸಲು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ನಿರ್ಧರಿಸಿದೆ.

ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಭಾರತ ಪುರುಷರ ತಂಡವು ಐತಿಹಾಸಿಕ ಥಾಮಸ್‌ ಕಪ್‌ ಜಯಿಸಿತ್ತು‌. ಇದರಿಂದ ಉತ್ತೇಜಿತಗೊಂಡಿರುವ ಬಿಎಐ, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಭಾರತ 3–0ಯಿಂದ ಇಂಡೊನೇಷ್ಯಾಕ್ಕೆ ಸೋಲುಣಿಸಿತ್ತು.

‘ನಾವು ಈ ಲಯವನ್ನು ಕಳೆದುಕೊಳ್ಳಬಾರದು. ಹೀಗಾಗಿ ಭಾರತದಲ್ಲಿ ಎರಡು ಬಿಡಬ್ಲ್ಯುಎಫ್‌ ಅಂತರಾಷ್ಟ್ರೀಯ ಚಾಲೆಂಜರ್ಸ್‌ ಟೂರ್ನಿಗಳನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ‘ ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.

ADVERTISEMENT

ವರ್ಷದಲ್ಲಿ ಒಟ್ಟು 31 ಅಂತರರಾಷ್ಟ್ರೀಯ ಚಾಲೆಂಜರ್ ಟೂರ್ನಿಗಳು ನಡೆಯುತ್ತವೆ. ಅವುಗಳ ಪೈಕಿ ಭಾರತ 2022ರಲ್ಲಿ ಒಂದನ್ನು ಮಾತ್ರ ಆಯೋಜಿಸಲಿದೆ. ಅದು ಅಕ್ಟೋಬರ್‌ 11ರಿಂದ 16ರವರೆಗೆ ಬೆಂಗಳೂರಿನಲ್ಲಿ ನಡೆಯುವ ಇನ್ಫೊಸಿಸ್‌ ಇಂಡಿಯಾ ಇಂಟರ್‌ನ್ಯಾಷನಲ್ ಟೂರ್ನಿ ಆಗಿದೆ.

‘ಕನಿಷ್ಠ 30 ಮಂದಿ ಕೋಚ್‌ಗಳನ್ನು ನೇಮಿಸಿಕೊಳ್ಳಲಾಗುವುದು. ₹ 50,000ರಿಂದ ₹ 2 ಲಕ್ಷ ವೇತನ ನೀಡಲಾಗುತ್ತದೆ. ಮಾಜಿ ಆಟಗಾರರು ಮತ್ತು ಎನ್‌ಐಎಸ್‌ ಕೋಚ್‌ಗಳು ಅರ್ಜಿ ಸಲ್ಲಿಸಬಹುದಾಗಿದೆ‘ ಎಂದು ಮಿಶ್ರಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.