ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಟಕುಟೊಗೆ ಮಣಿದ ಬಜರಂಗ್‌

ಪಿಟಿಐ
Published 23 ಅಕ್ಟೋಬರ್ 2018, 17:01 IST
Last Updated 23 ಅಕ್ಟೋಬರ್ 2018, 17:01 IST
ಬಜರಂಗ್ ಪೂನಿಯಾ ಮತ್ತು ಟಕುಟೊ ಒಟೊಗುರೊ ನಡುವಿನ ಹಣಾಹಣಿಯ ನೋಟ
ಬಜರಂಗ್ ಪೂನಿಯಾ ಮತ್ತು ಟಕುಟೊ ಒಟೊಗುರೊ ನಡುವಿನ ಹಣಾಹಣಿಯ ನೋಟ   

ಬುಡಾಪೆಸ್ಟ್‌, ಹಂಗರಿ: ಜಪಾನ್‌ನ ಚಿಗುರು ಮೀಸೆಯ ಕುಸ್ತಿಪಟು ಟಕುಟೊ ಒಟೊಗುರೊ ಸೋಮವಾರ ರಾತ್ರಿ ಹಾಕಿದ ಪಟ್ಟುಗಳಿಗೆ ಭಾರತದ ಬಜರಂಗ್ ಪೂನಿಯಾ ಅವರ ಕನಸು ಭಗ್ನಗೊಂಡಿತು.

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯೊಂದಿಗೆ ಕಣಕ್ಕೆ ಇಳಿದ ಬಜರಂಗ್‌ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡರು. 65 ಕೆಜಿ ವಿಭಾಗದವರ ಫೈನಲ್ ಬೌಟ್‌ ನಲ್ಲಿ ಅವರು 19 ವರ್ಷದ ಟಕುಟೊ ಒಟೊಗುರೊಗೆ 16–9ರಿಂದ ಮಣಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ಕುಸ್ತಿಪಟು ಎಂಬ ಖ್ಯಾತಿ ಟಕುಟೊ ಅವರದಾಯಿತು.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸುಶೀಲ್ ಕುಮಾರ್ ಮಾತ್ರ ಭಾರತದ ಪರವಾಗಿ ಚಿನ್ನ ಗೆದ್ದಿದ್ದಾರೆ. ಚಿನ್ನದ ಸಾಧನೆ ಮಾಡಿದ ಎರಡನೇ ಕುಸ್ತಿಪಟು ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳುವ ಭರವಸೆಯೊಂದಿಗೆ ಬಜರಂಗ್ ಸ್ಪರ್ಧೆಗೆ ಇಳಿದಿದ್ದರು.ಫೈನಲ್‌ನಲ್ಲಿ ಗೆದ್ದಿದ್ದರೆ ಒಂದೇ ವರ್ಷದಲ್ಲಿ ಎಲ್ಲ ಪ್ರಮುಖ ಟೂರ್ನಿಗಳಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಯೂ ಅವರದಾಗುತ್ತಿತ್ತು. ಆದರೆ 24 ವರ್ಷದ ಬಜರಂಗ್‌ ಜಪಾನ್‌ನ ‘ಎಳೆಯ’ ಪೈಲ್ವಾನನ ಮುಂದೆ ನಿರುತ್ತರರಾದರು.

ಆರಂಭದಲ್ಲಿ 5–0ಯಿಂದ ಮುನ್ನಡೆ ಗಳಿಸಿದ ಟಕುಟೊ, ಭಾರತದ ಕುಸ್ತಿ‍ಪಟುವನ್ನು ದಂಗಾಗಿಸಿದರು. ಮರು ಹೋರಾಟ ನಡೆಸಿದ ಪೂನಿಯಾ 4–5ರಿಂದ ಹಿನ್ನಡೆಯನ್ನು ತಗ್ಗಿಸಿಕೊಂಡರು. ನಂತರ ಟಕುಟೊ 7–6 ಮತ್ತು 9–6ರಿಂದ ಮುನ್ನಡೆದರು.

ದ್ವಿತೀಯಾರ್ಧದಲ್ಲಿ ಪೂನಿಯಾ ಅವರಿಂದ ಹೆಚ್ಚಿನ ಹೋರಾಟ ಕಂಡು ಬರಲಿಲ್ಲ. ಹೀಗಾಗಿ ಟಕುಟೊ ಭಾರಿ ಅಂತರದಿಂದ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.