ADVERTISEMENT

ಬಾಲ್‌ ಬ್ಯಾಡ್ಮಿಂಟನ್‌ನ ‘ಸ್ಟಾರ್‌’

ಜಿ.ಶಿವಕುಮಾರ
Published 1 ಮಾರ್ಚ್ 2020, 19:30 IST
Last Updated 1 ಮಾರ್ಚ್ 2020, 19:30 IST
   

ಐದು ವರ್ಷಗಳ ಹಿಂದಿನ ಮಾತು. ಚೆನ್ನೈನ ಎಸ್‌.ಆರ್‌.ಎಂ. ವಿಶ್ವವಿದ್ಯಾಲಯದಲ್ಲಿ ಆಯೋಜನೆಯಾಗಿದ್ದ ಫೌಂಡರ್‌ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಆ ಆಟಗಾರ್ತಿ ಕಾತರಳಾಗಿದ್ದಳು.

ಚೆನ್ನೈಗೆ ಹೊರಡುವ ಹಿಂದಿನ ದಿನವೇ ಆಕೆಯ ತಂದೆ ಅಕಾಲಿಕ ನಿಧನರಾಗಿದ್ದರು. ಆ ಸುದ್ದಿ ಕೇಳಿ ದಿಗ್ಭ್ರಾಂತಳಾಗಿದ್ದ ಆಟಗಾರ್ತಿ, ಅಂತ್ಯಕ್ರಿಯೆ ಮುಗಿಸಿ ಮನೆಯಲ್ಲಿ ಕೂರಲಿಲ್ಲ. ಅಪ್ಪನ ಅಗಲಿಕೆಯ ನೋವಿನ ನಡುವೆಯೂ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದಳು. ಎಲ್ಲಾ ಪಂದ್ಯಗಳಲ್ಲೂ ಅಪೂರ್ವ ಆಟ ಆಡಿ ‘ಶ್ರೇಷ್ಠ ಆಟಗಾರ್ತಿ’ ಪ್ರಶಸ್ತಿ ಪಡೆದಿದ್ದಳು.

ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದಲೇ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿರುವ ಆ ಸಾಧಕಿ ಜಿ.ಜಯಲಕ್ಷ್ಮಿ. ಬಂಟ್ವಾಳ ತಾಲ್ಲೂಕಿನ ಕಡೆಶಿವಾಲಯ ಗ್ರಾಮದ ಈ ಪ್ರತಿಭೆ, ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ.

ADVERTISEMENT

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಈ ತಾರೆ, ಸೀನಿಯರ್‌ ವಿಭಾಗದಲ್ಲಿ ಸತತ ಮೂರು ಬಾರಿ ‘ಸ್ಟಾರ್‌ ಆಫ್‌ ಇಂಡಿಯಾ’ (2017–18, 2018–19 ಮತ್ತು 2019–20) ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ನಿಮ್ಮ ಸಾರಥ್ಯದಲ್ಲಿ ಕರ್ನಾಟಕ ತಂಡ ಮತ್ತೊಮ್ಮೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ. ಈ ಸಾಧನೆ ಬಗ್ಗೆ ಹೇಳಿ?

ಸತತ ನಾಲ್ಕು ವರ್ಷ ಪ್ರಶಸ್ತಿ ಗೆದ್ದಿದ್ದರಿಂದ ವಿಶ್ವಾಸ ಹೆಚ್ಚಿತ್ತು. ಐದನೇ ಬಾರಿ ಟ್ರೋಫಿ ಎತ್ತಿಹಿಡಿಯಲೇಬೇಕೆಂದು ಪಣ ತೊಟ್ಟಿದ್ದೆವು. ಹೀಗಾಗಿ ಚಾಂಪಿಯನ್‌ಷಿಪ್‌ಗೂ ಮುನ್ನ ಕಠಿಣ ಅಭ್ಯಾಸ ನಡೆಸಿದ್ದೆವು. ನಾವು ಅಂದುಕೊಂಡಂತೆಯೇ ಸೆಮಿಫೈನಲ್‌ನಲ್ಲಿ ಕೇರಳ ತಂಡದ ಸವಾಲು ಎದುರಾಗಿತ್ತು. ಆ ತಂಡವನ್ನೇನೋ ಸುಲಭವಾಗಿ ಮಣಿಸಿದೆವು. ಆದರೆ ತಮಿಳುನಾಡು ವಿರುದ್ಧದ ಫೈನಲ್‌ ಪೈಪೋಟಿ ತುಂಬಾ ಕಠಿಣವಾಗಿತ್ತು. ಮೊದಲ ಸೆಟ್‌ನಲ್ಲಿ ಜಯಿಸಿದ ನಾವು ಎರಡನೇ ಸೆಟ್‌ ಕೈಚೆಲ್ಲಿದೆವು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಎಲ್ಲರೂ ಪರಿಣಾಮಕಾರಿಯಾಗಿ ಆಡಿದ್ದರಿಂದ ಪ್ರಶಸ್ತಿ ಒಲಿಯಿತು.

ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದ್ದ ನೀವು ಬಾಲ್‌ ಬ್ಯಾಡ್ಮಿಂಟನ್‌ನತ್ತ ಹೊರಳಿದ್ದು ಹೇಗೆ?

ಶಾಲಾ ಹಂತದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದೆ. ಎಸ್‌.ಎಸ್‌.ಎಲ್‌.ಸಿ.ಯಲ್ಲಿದ್ದಾಗ ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಟೂರ್ನಿಗಳಲ್ಲಿ ಆಡಿ, ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದೆ. ಅಷ್ಟಾದರೂ ಈ ಕ್ರೀಡೆಯ ತಂತ್ರಗಳು ಗೊತ್ತಿರಲಿಲ್ಲ. ಆಳ್ವಾಸ್‌ ಕಾಲೇಜಿಗೆ ಸೇರಿದ ಬಳಿಕ ನನ್ನ ಆಟದ ವೇಗ ಮತ್ತು ಎತ್ತರ ನೋಡಿ ‌ಪ್ರವೀಣ್‌ ಕುಮಾರ್‌ ಸರ್‌, ಬಾಲ್‌ ಬ್ಯಾಡ್ಮಿಂಟನ್‌ ಶಿಬಿರಕ್ಕೆ ಆಯ್ಕೆ ಮಾಡಿದರು. ಅವರೇ ವಿನೂತನ ಕೌಶಲಗಳನ್ನು ಹೇಳಿಕೊಟ್ಟರು.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ್‌ ಆಳ್ವಾ ಸರ್‌, ಪ್ರತಿಯೊಂದು ಹಂತದಲ್ಲೂ ಸಲಹೆ, ಪ್ರೋತ್ಸಾಹ ಮತ್ತು ಬೆಂಬಲ ನೀಡಿದರು. ಬಾಲ್‌ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕದ (ಬಿಬಿಎಕೆ) ಕಾರ್ಯದರ್ಶಿ ದಿನೇಶ್‌ ಸರ್, ಮಂಗಳೂರು ವಿಶ್ವವಿದ್ಯಾಲಯದ ಕಿಶೋರ್‌ ಸರ್‌ ಅವರ ಸಹಕಾರವನ್ನೂ ಮರೆಯುವಂತಿಲ್ಲ. ಅಣ್ಣಂದಿರು ಮತ್ತು ಅಮ್ಮ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ.

ಕರ್ನಾಟಕ ತಂಡದ ಬಗ್ಗೆ ಹೇಳಿ?

ತಂಡದಲ್ಲಿರುವ ಬಹುತೇಕರು ಆಳ್ವಾಸ್‌ ಶಿಕ್ಷಣ ಸಂಸ್ಥೆಯವರು. ನಾವೆಲ್ಲಾ ವರ್ಷಪೂರ್ತಿ ಜೊತೆಯಾಗಿಯೇ ಅಭ್ಯಾಸ ನಡೆಸುತ್ತೇವೆ. ಜೊತೆಯಾಗಿಯೇ ಆಡುತ್ತೇವೆ. ಹೀಗಾಗಿ ಹೊಂದಾಣಿಕೆ ಚೆನ್ನಾಗಿದೆ. ಇದರಿಂದಾಗಿ ತಂಡವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

ಒಟ್ಟು ನಾಲ್ಕು ಸಲ ‘ಸ್ಟಾರ್‌ ಆಫ್ ಇಂಡಿಯಾ’ ಗೌರವ ಗಳಿಸಿದ್ದೀರಿ. ಈ ಸಾಧನೆ ಬಗ್ಗೆ ಹೇಳಿ?

ಪಂದ್ಯವೊಂದರಲ್ಲಿ ನನ್ನಿಂದ ಪರಿಣಾಮಕಾರಿ ಆಟ ಮೂಡಿಬರದಿದ್ದಾಗ ನಿಗದಿಗಿಂತಲೂ ಒಂದೆರಡು ಗಂಟೆ ಹೆಚ್ಚು ಅಭ್ಯಾಸ ನಡೆಸಿ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ. ಜೊತೆಗೆ ಫಿಟ್‌ನೆಸ್‌ ಕಡೆಗೂ ಹೆಚ್ಚು ಗಮನ ಹರಿಸುತ್ತೇನೆ. ಹೀಗಾಗಿ ಈ ಸಾಧನೆ ಮೂಡಿದೆ. ಇದರಿಂದ ತುಂಬಾ ಖುಷಿಯಾಗಿದೆ.

ಕರ್ನಾಟಕದಲ್ಲಿ ಬಾಲ್‌ ಬ್ಯಾಡ್ಮಿಂಟನ್‌ಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿಲ್ಲ. ಇದರ ಪರಿಚಯವೂ ಬಹುತೇಕರಿಗೆ ಇಲ್ಲ. ಹೀಗಿದ್ದರೂ ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿದ್ದು ಏಕೆ?

ಬಾಲ್‌ ಬ್ಯಾಡ್ಮಿಂಟನ್‌ ಬಗ್ಗೆ ನನಗೆ ವಿಶೇಷ ಪ್ರೀತಿ. ಈ ಕ್ರೀಡೆ ಅಷ್ಟೇನು ಪರಿಚಿತವಲ್ಲ ನಿಜ. ಹಾಗಂತ ಬೇರೊಂದು ಕ್ರೀಡೆಯತ್ತ ಹೊರಳುವ ಆಲೋಚನೆ ಒಮ್ಮೆಯೂ ಮನದಲ್ಲಿ ಮೂಡಿಲ್ಲ. ಇದರಲ್ಲೇ ಎತ್ತರದ ಸಾಧನೆ ಮಾಡಿ ಈ ಕ್ರೀಡೆಯ ಕಂಪನ್ನು ಪಸರಿಸಬೇಕೆಂಬುದು ನನ್ನ ಕನಸು.

ಈಗ ಪರಿಸ್ಥಿತಿ ಬದಲಾಗಿದೆಯೇ?

ಈ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಪೋಸ್ಟಲ್‌ನಲ್ಲಿ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ. ಜೂನಿಯರ್‌ ಏಷ್ಯಾ (20 ವರ್ಷದೊಳಗಿನವರ) ಟೂರ್ನಿಗೆ ಒಪ್ಪಿಗೆ ಸಿಕ್ಕಿದೆ. ಸೀನಿಯರ್‌ ವಿಭಾಗದಲ್ಲೂ ಟೂರ್ನಿ ನಡೆಸಲು ಚಿಂತಿಸಲಾಗುತ್ತಿದೆ. ಹೀಗೆ ಹಂತ ಹಂತವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಲಭಿಸುತ್ತಿದೆ. ಈ ಆಟವನ್ನು ವೃತ್ತಿಪರವಾಗಿ ಸ್ವೀಕರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕ್ರೀಡೆಯೂ ಅಭಿವೃದ್ಧಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.