ADVERTISEMENT

ಬಿಟಿಸಿಯಲ್ಲಿ ರೇಸ್ ಚಟುವಟಿಕೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 16:40 IST
Last Updated 10 ಆಗಸ್ಟ್ 2023, 16:40 IST
REUTERS/Tommy Gilligan
   REUTERS/Tommy Gilligan

ಬೆಂಗಳೂರು: ಸರ್ಕಾರವು ಮಾಸಿಕ ಪರವಾನಗಿ ನವೀಕರಣ ಮಾಡಿರುವುದರಿಂದ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ (ಬಿಟಿಸಿ) ರೇಸ್‌ ಚಟುವಟಿಕೆಗಳು ಶುಕ್ರವಾರ ಪುನರಾರಂಭವಾಗಲಿದೆ.

ಮಾಸಿಕ ಪರವಾನಗಿ ನವೀಕರಣ ಮಾಡಲು ಆರಂಭದಲ್ಲಿ ಸರ್ಕಾರ ಒಪ್ಪಿರಲಿಲ್ಲ. ಇದರಿಂದ ಆ.1 ರಿಂದ ಬಿಟಿಸಿಯಲ್ಲಿ ನಡೆಯಬೇಕಿದ್ದ ರೇಸ್‌ಗಳು, ಆಫ್‌ಕೋರ್ಸ್ ಬೆಟ್ಟಿಂಗ್ ಚಟುವಟಿಕೆಗಳು ಸ್ಥಗಿತವಾಗಿದ್ದವು.

ಸರ್ಕಾರದೊಂದಿಗಿನ ಮಾತುಕತೆ ಸಫಲವಾಗಿದ್ದು, ಆಗಸ್ಟ್‌ ತಿಂಗಳ ಪರವಾನಗಿ ನವೀಕರಣಗೊಂಡಿದೆ. ಆದ್ದರಿಂದ ಬೇಸಿಗೆ ರೇಸ್‌ನ ಇನ್ನುಳಿದ ನಾಲ್ಕು ರೇಸ್‌ಗಳನ್ನು ನಡೆಸಲು ಇದ್ದಂತಹ ಅಡ್ಡಿ ದೂರವಾಗಿದೆ.

ADVERTISEMENT

ಸ್ಥಳಾಂತರಕ್ಕೆ ಒಪ್ಪಿಗೆ: ನಗರದ ಹೃದಯ ಭಾಗದಲ್ಲಿರುವ ಸ್ಥಳದಿಂದ ರೇಸ್‌ಕೋರ್ಸ್‌ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಮತ್ತು ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಸರ್ಕಾರ ಪಟ್ಟು ಹಿಡಿದಿತ್ತು.

ಕ್ಲಬ್‌ ಆಡಳಿತ ಸಮಿತಿಯು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎರಡನೇ ಸುತ್ತಿನ ಮಾತುಕತೆ ನಡೆಸಿದೆ. ಸರ್ಕಾರದ ಬೇಡಿಕೆಗಳಿಗೆ ಬಿಟಿಸಿ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿ ಅವರ ಬೇಡಿಕೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ರೇಸ್‌ಕೋರ್ಸ್‌ಅನ್ನು ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಕೇಳಿಕೊಂಡಿದ್ದಾರೆ. ಶೀಘ್ರದಲ್ಲೇ ಪರ್ಯಾಯ ಸ್ಥಳವನ್ನು ಕಂಡುಕೊಳ್ಳುವುದಾಗಿ ಅವರಿಗೆ ಭರವಸೆ ನೀಡಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ವಾಪಸ್‌ ಪಡೆಯುವ ಸಂಬಂಧ ಅಡ್ವೊಕೇಟ್‌ ಜನರಲ್‌ ಜತೆ ಮಾತುಕತೆ ನಡೆಸುತ್ತೇವೆ’ ಎಂದು ಬಿಟಿಸಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.