ADVERTISEMENT

ಬಿಟಿಸಿಯಲ್ಲಿ ನಾಳೆಯಿಂದ ಚಳಿಗಾಲದ ರೇಸ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 19:45 IST
Last Updated 13 ನವೆಂಬರ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಲ್ಲಿಯ ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಶುಕ್ರವಾರ (ನ.15)ದಿಂದ ಚಳಿಗಾಲದ ರೇಸ್‌ಗಳು ಆರಂಭವಾಗಲಿವೆ. ಮುಂದಿನ ವರ್ಷದ ಮಾರ್ಚ್ 21ರಂದು ಮುಕ್ತಾಯಗೊಳ್ಳಲಿವೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಟಿಸಿ ಅಧ್ಯಕ್ಷ ಡಿ. ವಿನೋದ್ ಶಿವಪ್ಪ, ‘ಚಳಿಗಾದ ಅವಧಿಯಲ್ಲಿ 26 ರೇಸ್‌ ದಿನಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 200 ರೇಸ್‌ಗಳು ನಡೆಯಲಿವೆ. ಎಲ್ಲ ವಿಭಾಗಗಳ ರೇಸ್‌ಗಳ ಬಹುಮಾನದ ಮೊತ್ತದಲ್ಲಿ ಶೇಕಡಾ ಎರಡರಷ್ಟು ಹೆಚ್ಚಳ ಮಾಡಲಾಗಿದೆ. ಬೇಸಿಗೆ ರೇಸ್‌ಗಳಲ್ಲಿ ನೀಡಲಾಗುವ ಬಹುಮಾನದ ಮೊತ್ತಕ್ಕಿಂತ ಶೇ 10.16ರಷ್ಟು ಹೆಚ್ಚಿನದ್ದಾಗಿದೆ’ ಎಂದರು.

‘ದೂರ ಅಂತರದ ರೇಸ್‌ಗಳನ್ನು ಪ್ರೋತ್ಸಾಹಿಸಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಒಂದು ಮೈಲಿಗಿಂತ ಹೆಚ್ಚು ದೂರದ ರೇಸ್‌ಗಳ ಬಹುಮಾನದ ಹಣವನ್ನು ಶೇ 25ರಷ್ಟು ಹೆಚ್ಚಳ ಮಾಡಲಾಗಿದೆ. ಒಟ್ಟು ವಿನಿಯೋಗದ ಮೊತ್ತವು ₹ 14.96 ಕೋಟಿಯೆಂದು ಅಂದಾಜಿಸಲಾಗಿದೆ. ಹೋದ ಸಲ 27 ರೇಸ್‌ ದಿನಗಳಿದ್ದವು. ಅದರಲ್ಲಿ ₹ 14.86 ಕೋಟಿ ವಿನಿಯೋಗಿಸಲಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ನೋಟು ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ (ಜೆಎಸ್‌ಟಿ) ಯಿಂದಾಗಿ ಚಳಿಗಾಲದ ರೇಸ್‌ಗಳ ಆಯವ್ಯಯ ಕಡಿಮೆಯಾಗಿದೆ. ಜಿಎಸ್‌ಟಿ ದರವನ್ನು ಕಡಿತ ಮಾಡಿಸುವ ಸಲುವಾಗಿ ರೇಸ್‌ ಕ್ಲಬ್‌ ಅಥಾರಿಟಿ ಆಫ್‌ ಇಂಡಿಯಾ ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ಮನವಿ ಮಾಡುತ್ತಲೇ ಇದೆ. ಸರ್ಕಾರದ ಸ್ಪಂದನೆಗಾಗಿ ಎದುರು ನೋಡುತ್ತಿದ್ದೇವೆ’ ಎಂದು ವಿನೋದ್ ಶಿವಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.