ADVERTISEMENT

ಬ್ಯಾಸ್ಕೆಟ್‌ಬಾಲ್‌: ಅಮೆರಿಕಕ್ಕೆ ಆಘಾತ

ರಾಯಿಟರ್ಸ್
Published 11 ಸೆಪ್ಟೆಂಬರ್ 2019, 20:15 IST
Last Updated 11 ಸೆಪ್ಟೆಂಬರ್ 2019, 20:15 IST
   

ಬೀಜಿಂಗ್‌ : ಫ್ರಾನ್ಸ್ ತಂಡದವರು, ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಅಚ್ಚರಿಯ ಫಲಿತಾಂಶದಲ್ಲಿ ಪ್ರಬಲ ಅಮೆರಿಕ ತಂಡಕ್ಕೆ ಆಘಾತ ನೀಡಿದರು. ಬುಧವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್‌ 89–79 ಪಾಯಿಂಟ್‌ಗಳಿಂದ ಹಾಲಿ ಚಾಂಪಿಯನ್‌ ಅಮೆರಿಕ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆಯಿತು.

ಫ್ರಾನ್ಸ್‌ ತಂಡ ಶುಕ್ರವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಆರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ.

ಸತತ ಮೂರನೇ ಬಾರಿ ಮತ್ತು ಒಟ್ಟಾರೆ ಆರನೇ ಬಾರಿ ವಿಶ್ವಕಪ್‌ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಅಮೆರಿಕ ಇನ್ನು 5 ರಿಂದ 8ನೇ ಸ್ಥಾನ ನಿರ್ಧಾರದ ಪಂದ್ಯಗಳಲ್ಲಿ ಆಡಬೇಕಾಗಿದೆ.

ADVERTISEMENT

2002ರ ಇಂಡಿಯನಾಪೊಲಿಸ್‌ ವಿಶ್ವಕಪ್‌ ನಡೆದ ಮೊದಲ ಬಾರಿ ಅಮೆರಿಕ ಪದಕವಿಲ್ಲದೇ ಮರಳಬೇಕಾದ ಸ್ಥಿತಿಗೆ ತಲುಪಿದೆ. ಆ ವರ್ಷ ಅಮೆರಿಕ, ಅಂದಿನ ಯುಗೋಸ್ಲಾವಿಯಾ ಎದುರು ಮಣಿದಿತ್ತು. ಈಗ ಅದರ ಭಾಗವಾಗಿರುವ ಸರ್ಬಿಯಾ, ಅಮೆರಿಕದ ಮುಂದಿನ ಎದುರಾಳಿಯಾಗಿದೆ. ಈ ವರ್ಷ ಅಮೆರಿಕ– ಸರ್ಬಿಯಾ ಚಿನ್ನದ ಪದಕಕ್ಕಾಗಿ ಎದುರಾಳಿಗಳಾಗಬಹುದೆಂಬ ನಿರೀಕ್ಷೆಯಿತ್ತು.

ಉತ್ಸಾಹಿ ಫ್ರಾನ್ಸ್‌ ಆಟದ ಎಲ್ಲ ವಿಭಾಗಗಳಲ್ಲಿ ಅಮೆರಿಕವನ್ನು ಮೀರಿಸಿತು. ವಿರಾಮದ ವೇಳೆಯೇ 45–39ರಲ್ಲಿ ಮುನ್ನಡೆ ಪಡೆದಿತ್ತು. ಮೂರನೇ ಕ್ವಾರ್ಟರ್‌ ಆರಂಭದಲ್ಲಿ ಈ ಲೀಡ್‌ 51–41ಕ್ಕೆ ಹೆಚ್ಚಿತು. ಇವಾನ್‌ ಫರ್ನಿಯರ್‌ ಮತ್ತು ನೀಳಕಾಯದ ರೂಡಿ ಗೋಬರ್ಟ್‌ ಅಮೋಘ ಆಟವಾಡಿದರು.

ಡೊನೊವನ್‌ ಮಿಚೆಲ್‌ ಮೂರನೇ ಕ್ವಾರ್ಟರ್‌ನಲ್ಲಿ 14 ಪಾಯಿಂಟ್‌ ಗಳಿಸಿ ಅಮೆರಿಕದ ಪ್ರತಿಹೋರಾಟದ ನೇತೃತ್ವ ವಹಿಸಿದರು. ಆಟ ಮುಕ್ತಾಯಕ್ಕೆ 10 ನಿಮಿಷಗಳಿದ್ದಾಗ ಅಮೆರಿಕ 66–63 ರಲ್ಲಿ ಮುನ್ನಡೆದಿತ್ತು. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ಡೊನವನ್‌ ಅವರಿಗೆ ಫ್ರೆಂಚರು ಕಾವಲು ಹಾಕಿದರು. ಇನ್ನೊಂದೆಡೆ ಅವರ ‘ಉತಾ ಜಾಝ್‌’ ತಂಡದ ಸಹ ಆಟಗಾರ ಗೋಬರ್ಟ್‌ ಮತ್ತು ಫರ್ನಿಯರ್‌ ಪ್ರಾಬಲ್ಯ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.