ADVERTISEMENT

ವಿದೇಶಿಗರ ಜೊತೆ ದೇಶಿ ಪೈಲ್ವಾನರ ಸೆಣಸಾಟ

ಫೆ.8–10ರವರೆಗೆ ಬೆಳಗಾವಿ ಕುಸ್ತಿ ಹಬ್ಬ;

ಶ್ರೀಕಾಂತ ಕಲ್ಲಮ್ಮನವರ
Published 28 ಜನವರಿ 2019, 14:42 IST
Last Updated 28 ಜನವರಿ 2019, 14:42 IST

ಬೆಳಗಾವಿ: ರಾಜ್ಯ ಸರ್ಕಾರ ಆಯೋಜಿಸಿರುವ ಪ್ರಪ್ರಥಮ ‘ಕರ್ನಾಟಕ ಕುಸ್ತಿ ಹಬ್ಬ’ ಫೆಬ್ರುವರಿ 8ರಿಂದ ಮೂರು ದಿನಗಳ ಕಾಲ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊನೆಯ ದಿನ, ಜಾರ್ಜಿಯಾ ದೇಶದ ಮೂವರು ಪುರುಷ ಪಟುಗಳು ಹಾಗೂ ಅಜರಬಾಯಿಜಾನ್‌ ದೇಶದ ಇಬ್ಬರು ಮಹಿಳಾ ಪಟುಗಳು ಸ್ಥಳೀಯ ಪಟುಗಳ ಜೊತೆ ಸೆಣಸಾಟ ನಡೆಸಲಿದ್ದಾರೆ. ಇದು ಕುಸ್ತಿ ಹಬ್ಬದ ‌ಪ್ರಮುಖ ಆಕರ್ಷಣೆಯಾಗಲಿದೆ.

ಜಾರ್ಜಿಯಾದ ಜಿಯಾರ್ಜಿಯಾ ಸಕಂಡೆಲಿಜ್‌ (28), ಇಬನೊಜ್‌ ಟೆಡೊರ್‌ (27) ಹಾಗೂ ಕೊರ್ಡಜಿಯಾ ಮಮುಕಾ (27) ಪುರುಷ ಪಟುಗಳು ದೇಶೀಯ ಪೈಲ್ವಾರ ಜೊತೆ ಪಟ್ಟು ಹಾಕಲಿದ್ದಾರೆ. ಮಹಿಳಾ ಪಟುಗಳಾದ ಅಜರಬಾಯಿಜಾನ್‌ ದೇಶದ ಸೆಯ್ಲಾ ನಾಜಿಜಡೆ (20) ಹಾಗೂ ಎಲ್ಯೊಂನ ಕಲೆಸ್ನಿಕ್‌ (24) ಕೂಡ ಭಾಗವಹಿಸಲಿದ್ದಾರೆ.

ಜಾರ್ಜಿಯಾದ ಪಟುಗಳ ಜೊತೆ ಪಂಜಾಬ್‌ನ ಗೌರವ ಸಿಂಗ್‌, ಹರ‍್ಯಾಣದ ಮೊಸಮ ಖತರಿ ಹಾಗೂ ನವದೆಹಲಿಯ ಮಂಜಿತ್‌ ಖತರಿ ಸೆಣಸಲಿದ್ದಾರೆ. ಮಹಿಳಾ ಪಟುಗಳ ಜೊತೆ ಸೆಣಸಾಡುವ ಸ್ಥಳೀಯ ಪಟುಗಳ ಆಯ್ಕೆ ಅಂತಿಮ ಹಂತದಲ್ಲಿದೆ.

ADVERTISEMENT

ರಾಷ್ಟ್ರಮಟ್ಟದ ಪ್ರಮುಖ ಕುಸ್ತಿ ಪಟುಗಳಾದ ಹರ‍್ಯಾಣದ ಪರವೀಣ್‌ ಬೋರಾ ಹಾಗೂ ಮಹಾರಾಷ್ಟ್ರದ ಜ್ಞಾನೇಶ್ವರ ಮೌಲಿ ಜಮದಾಡಿ, ಪಂಜಾಬ್‌ನ ಕಂವಲ್‌ಜೀತ್‌ ಸಿಂಗ್‌ ಹಾಗೂ ಉತ್ತರ ಪ್ರದೇಶದ ಉಮೇಶ, ಹ‍ರ‍್ಯಾಣದ ಸುನೀತ್‌ಕುಮಾರ ಹಾಗೂ ಕರ್ನಾಟಕದ (ರಾಣೆಬೆನ್ನೂರು) ಕಾರ್ತಿಕ ಕಾಟೆ ಅವರೂ ಸೆಣಸಲಿದ್ದಾರೆ.

‘ಈ ಪಂದ್ಯಗಳನ್ನು ಮುಖ್ಯವಾಗಿ ಪ್ರೇಕ್ಷಕರನ್ನು ರಂಜಿಸಲು ಆಯೋಜಿಸಲಾಗುತ್ತಿದೆ. ಇವು ಜಂಗೀ ನಿಕಾಲಿ ಕುಸ್ತಿಯಾಗಿದ್ದು, ಸೋಲು– ಗೆಲುವು ನಿರ್ಧಾರವಾಗುವವರೆಗೆ ನಡೆಯುತ್ತವೆ. ಇಲ್ಲಿ ಗೆದ್ದವರಿಗೆ ಯಾವುದೇ ಪ್ರಶಸ್ತಿ ನೀಡುವುದಿಲ್ಲ. ಆದರೆ, ಗೌರವ ಧನ ನೀಡುತ್ತೇವೆ. ನಮ್ಮ ದೇಶದ ಸಾಂಪ್ರದಾಯಕ ಕ್ರೀಡೆಯಾಗಿರುವ ಕುಸ್ತಿಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಇದನ್ನು ಆಯೋಜಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷ ರತನ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದ ಪಟುಗಳಿಗೆ ಸ್ಪರ್ಧೆ
ಕಳೆದ ವರ್ಷ ಬಜೆಟ್‌ ಮಂಡಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕುಸ್ತಿ ಹಬ್ಬ ಆಚರಿಸಲು ₹ 2 ಕೋಟಿ ಅನುದಾನ ಒದಗಿಸಿದ್ದರು. ಆ ಅನುದಾನದಲ್ಲಿ ಕುಸ್ತಿ ಹಬ್ಬ ನಡೆಯುತ್ತಿದೆ. ರಾಜ್ಯದ ಕುಸ್ತಿ ಪಟುಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಪೈಲ್ವಾನರು ನೇರವಾಗಿ ಇಲ್ಲಿಗೆ ಬಂದು ಭಾಗವಹಿಸಬಹುದು. ಫೆಬ್ರುವರಿ 7ರಂದು ಪಟುಗಳ ತೂಕದ ಪರೀಕ್ಷೆ ನಡೆಯುತ್ತದೆ.

ಬಾಲಕೇಸರಿ– 14 ವರ್ಷ ವಯೋಮಿತಿಯ ಬಾಲಕರು (52 ಕೆ.ಜಿ), ಬಾಲಕಿಯರು (46 ಕೆ.ಜಿ). ಕರ್ನಾಟಕ ಕಿಶೋರ– 17 ವರ್ಷ ವಯೋಮಿತಿಯ ಬಾಲಕರು (60 ಕೆ.ಜಿ), ಕರ್ನಾಟಕ ಕಿಶೋರಿ– 17 ವರ್ಷ ವಯೋಮಿತಿಯ ಬಾಲಕಿಯರು (53 ಕೆ.ಜಿ), ಕರ್ನಾಟಕ ಕೇಸರಿ– 18 ವರ್ಷ ಮೇಲ್ಪಟ್ಟ ಪುರುಷರು (86 ಕೆ.ಜಿ– 125 ಕೆ.ಜಿ), ಮಹಿಳೆಯರು (59 ಕೆ.ಜಿ– 76 ಕೆ.ಜಿ) ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

‘ಸುಮಾರು 800 ಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಇವರಿಗೆ ಊಟ, ವಸತಿ ಹಾಗೂ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ. ಫೆ.8ರಿಂದ 10ರ ಸಂಜೆ 4 ಗಂಟೆಯವರೆಗೆ ಈ ಮೂರೂ ಪ್ರಶಸ್ತಿಯ ಪಂದ್ಯಗಳು ಮುಗಿಯುತ್ತವೆ. ನಂತರ ವಿದೇಶಿ ಪಟುಗಳ ಜೊತೆ ಸ್ಥಳೀಯ ಪೈಲ್ವಾನರು ಸೆಣಸಾಟ ನಡೆಸಲಿದ್ದಾರೆ’ ಎಂದು ರತನ ಮಠಪತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.