ADVERTISEMENT

ಕಬಡ್ಡಿ: ವಾರಿಯರ್ಸ್‌ಗೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 18:35 IST
Last Updated 24 ಜುಲೈ 2019, 18:35 IST
ಬಂಗಾಲ್‌ ವಾರಿಯರ್ಸ್‌ ತಂಡದ ಎಸ್ಮಾಯಿಲ್‌ ನಬಿಬಕ್ಷ್‌ ಎದುರಾಳಿ ಯು.ಪಿ. ಯೋಧಾ ತಂಡದ ರಕ್ಷಣೆ ಆಟಗಾರರಿಂದ ಯಶಸ್ವಿಯಾಗಿ ತಪ್ಪಿಸಿಕೊಂಡು ಗೆರೆ ಮುಟ್ಟಿದರು.
ಬಂಗಾಲ್‌ ವಾರಿಯರ್ಸ್‌ ತಂಡದ ಎಸ್ಮಾಯಿಲ್‌ ನಬಿಬಕ್ಷ್‌ ಎದುರಾಳಿ ಯು.ಪಿ. ಯೋಧಾ ತಂಡದ ರಕ್ಷಣೆ ಆಟಗಾರರಿಂದ ಯಶಸ್ವಿಯಾಗಿ ತಪ್ಪಿಸಿಕೊಂಡು ಗೆರೆ ಮುಟ್ಟಿದರು.   

ಹೈದರಾಬಾದ್‌: ಇರಾನ್‌ನ ಆಟಗಾರ ಎಸ್ಮಾಯಿಲ್‌ ನಬಿಬಕ್ಷ್ ಅವರ ಉತ್ತಮ ರೈಡಿಂಗ್‌ ನೆರವಿನಿಂದ ಬಂಗಾಲ್‌ ವಾರಿಯರ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬುಧವಾರ ಯು.ಪಿ.ಯೋಧಾ ತಂಡವನ್ನು 48–17 ಪಾಯಿಂಟ್‌ಗಳಿಂದ ಸುಲಭವಾಗಿ ಮಣಿಸಿತು.

ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಎಸ್ಮಾಯಿಲ್‌ 10 ಪಾಯಿಂಟ್‌ ಗಳಿಸಿದರೆ, ಮಣಿಂದರ್‌ ಸಿಂಗ್‌ (7 ಪಾಯಿಂಟ್‌) ಮತ್ತು ಪ್ರಪಂಜನ್‌ (5 ಪಾಯಿಂಟ್‌) ಅವರಿಗೆ ಉತ್ತಮ ಬೆಂಬಲ ನೀಡಿದರು. ಟ್ಯಾಕ್ಲಿಂಗ್‌ನಲ್ಲಿ ರಿಂಕು ನರ್ವಾಲ್‌ ಮತ್ತು ಜೀವಕುಮಾರ್‌ ಮಿಂಚಿದರು. ಯೋಧಾ ಪರ ಮೋನು ಗೋಯತ್‌ ಮಾತ್ರ ಸ್ವಲ್ಪ ಹೋರಾಟ ತೋರಿದರು.

ಮೊದಲ ಪಂದ್ಯಕ್ಕೆ ತದ್ವಿರುದ್ಧವಾಗಿ ತೀವ್ರ ಹೋರಾಟ ಕಂಡ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ 34–33 ರಲ್ಲಿ ಕೇವಲ ಒಂದು ಪಾಯಿಂಟ್‌ ಅಂತರದಿಂದ ಆತಿಥೇಯ ತೆಲುಗು ಟೈಟನ್ಸ್‌ ಮೇಲೆ ಜಯಗಳಿಸಿತು. ನವೀನ್‌ ಕುಮಾರ್‌ ಆಕರ್ಷಕ ರೈಡಿಂಗ್ ಮೂಲಕ ಮೂರು ಬೋನಸ್‌ ಸೇರಿ 15 ಪಾಯಿಂಟ್‌ಗಳನ್ನು ತಂದುಕೊಟ್ಟು ಡೆಲ್ಲಿ ತಂಡದ ಗೆಲುವಿನಲ್ಲಿ ಗಮನ ಸೆಳೆದರು.

ADVERTISEMENT

ತೆಲುಗು ಟೈಟನ್ಸ್‌ನ ಸೂರಜ್‌ ದೇಸಾಯಿ ಅವರ ಅಮೋಘ ರೈಡಿಂಗ್‌ ಪ್ರದರ್ಶನ ನೆರವಿಗೆ ಬರಲಿಲ್ಲ. ಅವರು ಐದು ಬೋನಸ್‌ ಒಳಗೊಂಡಂತೆ 18 ರೈಡಿಂಗ್‌ ಪಾಯಿಂಟ್‌ ಗಳಿಸಿ ಏಕಾಂಗಿ ಹೋರಾಟ ತೋರಿದರು.

ಗಂಭೀರ್‌ ಅಂಬಾಸಿಡರ್‌: ಕ್ರಿಕೆಟಿಗ ಗೌತಮ್‌ ಗಂಭೀರ್ ಅವರನ್ನು ಯು.ಪಿ. ಯೋಧಾ ತಂಡ ಆಧಿಕೃತ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ನೇಮಕ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.