ADVERTISEMENT

ಸಾಜನ್‌ ಐತಿಹಾಸಿಕ ಸಾಧನೆ- 23 ವರ್ಷದೊಳಗಿನವರ ವಿಶ್ವ ಕುಸ್ತಿಯಲ್ಲಿ ಕಂಚು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 13:52 IST
Last Updated 19 ಅಕ್ಟೋಬರ್ 2022, 13:52 IST
ಕಂಚು ಗೆದ್ದ ಸಾಜನ್‌ ಭಾನ್ವಾಲ್ (ಮಧ್ಯ) –ಪಿಟಿಐ ಚಿತ್ರ
ಕಂಚು ಗೆದ್ದ ಸಾಜನ್‌ ಭಾನ್ವಾಲ್ (ಮಧ್ಯ) –ಪಿಟಿಐ ಚಿತ್ರ   

ಪೊಂತೆವೇದ್ರಾ, ಸ್ಪೇನ್‌ (ಪಿಟಿಐ): ಭಾರತದ ಗ್ರೀಕೊ ರೋಮನ್‌ ಕುಸ್ತಿಪಟು ಸಾಜನ್‌ ಭಾನ್ವಾಲ್‌ ಅವರು ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.

ಈ ವಯೋವರ್ಗದ ವಿಶ್ವ ಚಾಂಪಿಯನ್‌ಷಿಪ್‌ನ ಗ್ರೀಕೊ ರೋಮನ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು ಎಂಬ ಗೌರವ ಅವರಿಗೆ ಒಲಿಯಿತು.

ಕಂಚಿನ ಪದಕ ನಿರ್ಣಯಿಸಲು ಬುಧವಾರ ನಡೆದ ಹಣಾಹಣಿಯಲ್ಲಿ ಅವರು ಉಕ್ರೇನ್‌ನ ದಿಮಿತ್ರೊ ವಸೆಟ್‌ಸ್ಕಿ ವಿರುದ್ಧ ಗೆದ್ದರು.

ADVERTISEMENT

ಜಿದ್ದಾಜಿದ್ದಿನ ಹೋರಾಟದಲ್ಲಿ ದಿಮಿತ್ರೊ 10–4 ಪಾಯಿಂಟ್ಸ್‌ಗಳ ಮುನ್ನಡೆ ಸಾಧಿಸಿದ್ದರು. ತಿರುಗೇಟು ನೀಡಿದ ಸಾಜನ್‌ ಕೊನೆಯ 35 ಸೆಕೆಂಡುಗಳು ಇರುವಾಗ ಮೇಲಿಂದ ಮೇಲೆ ಪಾಯಿಂಟ್ಸ್‌ ಕಲೆಹಾಕಿ 10–10 ರಲ್ಲಿ ಸಮಬಲ ಸಾಧಿಸಿದರು.

ಟೈಬ್ರೇಕರ್‌ ನಿಯಮದಂತೆ ಕೊನೆಯದಾಗಿ ಪಾಯಿಂಟ್‌ ಗಳಿಸಿದ ಸಾಜನ್‌ ಅವರನ್ನು ವಿಜೇತ ಎಂದು ಘೋಷಿಸಲಾಯಿತು.

ಸಾಜನ್ ಮೊದಲ ಸುತ್ತಿನಲ್ಲಿ 3–0 ರಲ್ಲಿ ಲಿಥುವೇನಿಯದ ಐಸ್ಟಿಸ್‌ ಲುಗ್‌ಮಿನಸ್‌ ಅವರನ್ನು ಮಣಿಸಿದ್ದರು. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಲ್ಡೋವಾದ ಅಲೆಕ್ಸಾಂಡ್ರಿನ್ ಗುಟು ಕೈಯಲ್ಲಿ ಸೋತರು.

ಆದರೆ ಗುಟು ಅವರು ಫೈನಲ್‌ ಪ್ರವೇಶಿಸಿದ್ದರಿಂದ, ಭಾರತದ ಕುಸ್ತಿಪಟುಗೆ ‘ರಿಪೇಜ್‌’ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಅಲ್ಲಿ ಕಜಕಸ್ತಾನದ ರಸುಲ್ ಜುನಿಸ್‌ ವಿರುದ್ಧ ಗೆದ್ದು, ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸುವ ಅರ್ಹತೆ ಗಿಟ್ಟಿಸಿಕೊಂಡರು.

ಭಾರತದ ವಿಕಾಸ್‌ ಅವರು 72 ಕೆ.ಜಿ ವಿಭಾಗದಲ್ಲಿ ಮತ್ತು ಸುಮಿತ್‌ ಅವರು 60 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

67 ಕೆ.ಜಿ ವಿಭಾಗದಲ್ಲಿ ಕಣದಲ್ಲಿದ್ದ ಆಶು ಅವರು ಜಾರ್ಜಿಯದ ಡಿಯಾಗೊ ಚಿಕ್ವಾಡ್ಜೆ ಎದುರು ಸೋತು ಹೊರಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.