ADVERTISEMENT

ವಜ್ರದೇಹಿ ಮುರಳಿಯ ಶತಕ ಸಾಧನೆ

ದೇಹದಾರ್ಢ್ಯ

ಮುದ್ದು ತೀರ್ಥಹಳ್ಳಿ
Published 8 ನವೆಂಬರ್ 2018, 20:00 IST
Last Updated 8 ನವೆಂಬರ್ 2018, 20:00 IST
   

ಇವರ ಹೆಸರು ಮುರಳಿ. ಉಕ್ಕಿನ ಮನುಷ್ಯನಂತಿರುವ ಆಕರ್ಷಕ ದೇಹದ ಹಿಂದೆ ಹಲವು ವರುಷಗಳ ಕಠಿಣ ಪರಿಶ್ರಮವಿದೆ. ಮೂಲತಃ ರಾಯಲ ಸೀಮಾದವರು. ಸದ್ಯ ಬೆಂಗಳೂರಿನಲ್ಲಿ ವಾಸ.

ಸಣ್ಣ ಬಡ ಕುಟುಂಬದಿಂದ ಬಂದ ಇವರು ಕೇವಲ ತನ್ನ ಪ್ರತಿಭೆ ಹಾಗೂ ಕಠಿಣ ಶ್ರಮದಿಂದಲೇ ಸಮಾಜದಲ್ಲಿ ಗುರುತಿಸಿಕೊಂಡವರು. ಸೇನೆಯಲ್ಲಿ ಭರ್ತಿಯಾಗಬೇಕೆಂಬ ಕನಸ ಹೊತ್ತಿದ್ದರೂ ಆರ್ಥಿಕ ಸಮಸ್ಯೆಗಳಿಂದಾಗಿ ಸಾಧ್ಯವಾಗಲಿಲ್ಲ. ದೇಹಧಾರ್ಢ್ಯದತ್ತ ಮುಖ ಮಾಡಿದರು. ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ದೇಹದಾರ್ಢ್ಯ ಪಯಣವನ್ನು ಆರಂಭಿಸಿ ಕೇವಲ ಆರು ವರ್ಷಗಳ ಸಣ್ಣ ಅವಧಿಯಲ್ಲೇ ಸುಮಾರು ನೂರಾ ಮೂರು ದೇಹಧ್ಯಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

26 ವಯಸ್ಸಿನ ಮುರಳಿ ಈಗಾಗಲೇ ಮಿಸ್ಟರ್ ಬೆಂಗಳೂರು-2016, 2017, ಮಿಸ್ಟರ್ ಕರ್ನಾಟಕ-2016, ಮಿಸ್ಟರ್ ಇಂಡಿಯಾ-2015, ಮಿಸ್ಟರ್ ಸೌತ್ ಇಂಡಿಯಾ 2018, ಮಿಸ್ಟರ್ ಬಾಸ್ ಕ್ಲಾಸಿಕ್ 2018, ಮಿಸ್ಟರ್ ಕನ್ನಡ ಸಿರಿ 2018, ಮಿಸ್ಟರ್ ವಜ್ರದೇಹಿ 2018, ಮಿಸ್ಟರ್ ನಮ್ಮ ಮೈಸೂರು 2018, ಮಸಲ್ ಗಾಡ್ 2015, ಸಂಗೊಳ್ಳಿ ರಾಯಣ್ಣ ಕಪ್ 2017, ಮಿಸ್ಟರ್ ಸಾಗರ್ ಬೆಸ್ಟ್ ಪೋಸರ್ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಷ್ಠಿತ ಶೀರ್ಷಿಕೆಗಳಿಗೆ ಭಾಜನರಾಗಿದ್ದಾರೆ. ನಾಲ್ಕು ಬಾರಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದರೂ ಹಣಕಾಸಿನ ಸಮಸ್ಯೆಯಿಂದಾಗಿ ಮುಂದಕ್ಕೆ ಹೋಗಲಾಗದಿರುವುದು ಮಾತ್ರ ದುರದೃಷ್ಟದ ಸಂಗತಿ!

ADVERTISEMENT

ಪ್ರಸ್ತುತ ಬೆಂಗಳೂರಿನ ನಾಗರಭಾವಿಯಲ್ಲಿ ನೆಲೆಸಿರುವ ಇವರು, ಬೆಂಗಳೂರಿನ ಪ್ರತಿಷ್ಠಿತ ಜಿಮ್ ಗಳಲ್ಲಿ ದೈಹಿಕ ತರಬೇತುದಾರರಾಗಿಯೂ ಕೆಲಸವನ್ನು ಮಾಡುತ್ತಿದ್ದಾರೆ. ಕಿರುತೆರೆ, ಕನ್ನಡ ಚಿತ್ರರಂಗತಾರೆಯರಿಗೆ ದೈಹಿಕ ತರಬೇತುದಾರರಾಗಿದ್ದಾರೆ. ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿರುವುದಲ್ಲದೇ ಇಪ್ಪತ್ತೊಂದಕ್ಕೂ ಹೆಚ್ಚು ಸಿನೆಮಾಗಳಲ್ಲಿ ಸ್ಟಂಟ್ ಗಳನ್ನೂ ಸಹ ಪ್ರದರ್ಶಿಸಿದ್ದಾರೆ. ದೇಹದಾರ್ಢ್ಯ ಮಾಡುವುದೆಂದರೆ ಅದಕ್ಕೆ ತಕ್ಕುದಾದ ಸಮತೋಲಿತ ಆಹಾರವನ್ನೂ ಸೇವಿಸಬೇಕು. ಈ ಖರ್ಚು ನಿಭಾಯಿಸಲು ಸಿನೆಮಾಗಳಲ್ಲಿ ಸ್ಟಂಟ್ ಮಾಡಲು ಹೋಗುತ್ತೇನೆ ಎನ್ನುತ್ತಾರೆ ಮುರಳಿ! ವೇಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಇತ್ಯಾದಿ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರತಿದಿನವೂ ನಾಲ್ಕರಿಂದ ಐದು ತಾಸು ವ್ಯಾಯಾಮಕ್ಕಾಗಿಯೇ ಮೀಸಲಿಡುವುದರ ಜೊತೆ ಕಟ್ಟುನಿಟ್ಟಾದ ಆಹಾರ ಕ್ರಮ ಹಾಗೂ ಜೀವನಶೈಲಿಯನ್ನು ರೂಢಿಸಿಕೊಂಡಿದ್ದಾರೆ. ದೇಹವನ್ನು ದಂಡಿಸಿ ಹದಕ್ಕೆ ತರುವುದು ಅತ್ಯಂತ ಕಷ್ಟಕರ ಕೆಲಸ.. ಪ್ರತಿ ಕ್ರೀಡೆಯಲ್ಲಿಯೂ ದೇಹದಂಡನೆಯಿದ್ದೇ ಇರುತ್ತದೆ.

ಇಷ್ಟೆಲ್ಲಾ ಸಾಧನೆ ಮಾಡಿರುವ ಈ ಪ್ರತಿಭೆಗೆ ಸರ್ಕಾರದಿಂದ ಇದುವರೆಗೂ ಯಾವ ರೀತಿಯ ನೆರವೂ ಬಂದಿಲ್ಲ.. ಇತ್ತೀಚೆಗಷ್ಟೇ ತೆಲಂಗಾಣದ ಮುಖ್ಯಮಂತ್ರಿಯವರು ತಮ್ಮ ರಾಜ್ಯದ ಯುವ ದೇಹದಾರ್ಢ್ಯ ಪ್ರತಿಭೆಯನ್ನು ಗುರುತಿಸಿ ಆತನಿಗೆ ಐದು ಲಕ್ಷ ಧನಸಹಾಯವನ್ನು ಮಾಡಿದ್ದಾರೆ. ಹಾಗೆಯೇ ಮಹಾರಾಷ್ಟ್ರ ಸರ್ಕಾರವೂ ತಮ್ಮ ರಾಜ್ಯದಲ್ಲಿನ ದೇಹದಾರ್ಢ್ಯ ಪ್ರತಿಭೆಯನ್ನು ಗುರುತಿಸಿ ಅವರಿಗೆ ಧನಸಹಾಯ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ರೀತಿಯ ಪ್ರತಿಭೆಯನ್ನು ಗುರುತಿಸದಿರುವುದಕ್ಕೆ ಮುರಳಿ ಅತ್ಯಂತ ವಿಷಾದವನ್ನು ವ್ಯಕ್ತಪಡಿಸುತ್ತಾರೆ.

ಸಂಪರ್ಕ ಸಂಖ್ಯೆ 99164 02204

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.