ADVERTISEMENT

ಮಾಹೆ: ಏಪ್ರಿಲ್‌ನಲ್ಲಿ ವೃತ್ತಿಪರ ಬಾಕ್ಸಿಂಗ್ ಕೂಟ

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಬಾಕ್ಸಿಂಗ್ ಪಟುಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 15:45 IST
Last Updated 21 ಫೆಬ್ರುವರಿ 2022, 15:45 IST
ಮಾಹೆಯಲ್ಲಿ ಏಪ್ರಿಲ್‌ನಲ್ಲಿ ವೃತ್ತಿಪರ ಬಾಕ್ಸಿಂಗ್ ಕೂಟ ಆಯೋಜಿಸಲಾಗುತ್ತಿದೆ ಎಂದು ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಳ್ಳಾಳ್‌ ಹೇಳಿದರು. ಖ್ಯಾತ ಬಾಕ್ಸಿಂಗ್ ಪಟು ನೀರಜ್ ಗೋಯಟ್ ಇದ್ದರು.
ಮಾಹೆಯಲ್ಲಿ ಏಪ್ರಿಲ್‌ನಲ್ಲಿ ವೃತ್ತಿಪರ ಬಾಕ್ಸಿಂಗ್ ಕೂಟ ಆಯೋಜಿಸಲಾಗುತ್ತಿದೆ ಎಂದು ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಳ್ಳಾಳ್‌ ಹೇಳಿದರು. ಖ್ಯಾತ ಬಾಕ್ಸಿಂಗ್ ಪಟು ನೀರಜ್ ಗೋಯಟ್ ಇದ್ದರು.   

ಉಡುಪಿ: ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್‌ನಿಂದ ಏಪ್ರಿಲ್‌ನಲ್ಲಿ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಬಲ್ಲಾಳ್ ತಿಳಿಸಿದ್ದಾರೆ.

ಕರಾವಳಿಯ ಮೊದಲ ಬಾರಿಗೆ ವೃತ್ತಿಪರ ಬಾಕ್ಸಿಂಗ್ ಕೂಟ ಇದಾಗಿದ್ದು, ‘ಪಂಚ್‌ ಟು ಬೀಟ್‌ ದಿ ವೇವ್’ ಘೋಷವಾಕ್ಯದಡಿ ಕೂಟ ನಡೆಯಲಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಬಾಕ್ಸಿಂಗ್ ಪಟುಗಳು ಭಾಗವಹಿಸಲಿದ್ದಾರೆ. ಭಾರತದ ಭರವಸೆಯ ಬಾಕ್ಸರ್ ಖ್ಯಾತಿಯ ನೀರಜ್‌ ಗೋಯಟ್‌ ಸಹಯೋಗದಲ್ಲಿ ಮಾಹೆ ಬಾಕ್ಸಿಂಗ್ ಟೂರ್ನಿ ಆಯೋಜಿಸುತ್ತಿದೆ.

ಈಚೆಗೆ ನೀರಜ್ ಗೋಯಟ್‌ ಮಾಹೆಯ ಮರೆನಾ ಕ್ರೀಡಾ ಸಂಕೀರ್ಣಕ್ಕೆ ಭೇಟಿನೀಡಿ ಅಲ್ಲಿನ ಕ್ರೀಡಾ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಶೈಕ್ಷಣಿಕ ಸಂಸ್ಥೆಗಳಲ್ಲಿ ಪಠ್ಯದಷ್ಟೆ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ಸಿಗಬೇಕು. ಮಾಹೆಯಲ್ಲಿ ಕ್ರೀಡೆಗೆ ಪೂರಕವಾದ ಅವಕಾಶಗಳನ್ನು ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು ಎಂದು ತಿಳಿಸಿದರು.

ADVERTISEMENT

ವೃತ್ತಿಪರ ಬಾಕ್ಸರ್ ನೀರಜ್ ಗೋಯಟ್ ಜತೆಗೂಡಿ ಮಾಹೆಯಲ್ಲಿ ಬಾಕ್ಸಿಂಗ್ ಕೂಟ ಆಯೋಜಿಸುತ್ತಿರುವುದು ಸಂತಸ ತಂದಿದೆ. ಮಾಹೆಯಲ್ಲಿ ಶಿಕ್ಷಣದಷ್ಟೆ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಾ ಬರಲಾಗಿದ್ದು, ಕ್ರೀಡೆಯಿಂದ ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಡಾ.ಎಚ್‌.ಎಸ್‌.ಬಲ್ಲಾಳ್ ಹೇಳಿದರು.

ಮಾಹೆ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ‘ವಿದ್ಯಾರ್ಥಿಗಳ ವೈಕ್ತಿತ್ವ ನಿರ್ಮಾಣದಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸಸಲಿದ್ದು, ಮಾಹೆಯಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ’ ಎಂದರು.

ಮಾಹೆಯ ಮರೇನಾ ಬಹುಮಹಡಿ ಕ್ರೀಡಾ ಸಂಕೀರ್ಣದಲ್ಲಿ ಹಲವು ಕ್ರೀಡೆಗಳನ್ನು ಒಂದೆಡೆ ಆಯೋಜಿಸಲು ಎಲ್ಲ ಸೌಲಭ್ಯಗಳು ಇವೆ. ವೃತ್ತಿಪರ ಕೋಚ್‌ಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದರು.

ಮಾಹೆ ರಿಜಿಸ್ಟ್ರಾರ್ ನಾರಾಯಣ ಸಭಾಯಿತ್‌, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ಪಿಆರ್‌ ನಿರ್ದೇಶಕ ಎಸ್‌.ಪಿ.ಕಾರ್, ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್‌, ಸಹ ಕಾರ್ಯದರ್ಶಿ ಡಾ.ಶೋಭಾ ಈರಪ್ಪ, ಮಾಹೆ ಸಹ ಉಪ ಕುಲಪತಿ ಡಾ.ಪಿ.ಎಲ್‌.ಎನ್‌.ಜಿ ರಾವ್, ಎಂಐಟಿ ನಿರ್ದೇಶಕ ಅನಿಲ್ ರಾಣಾ, ಪ್ರೊ.ಬಾಲಕೃಷ್ಣ ರಾವ್‌, ಡಾ.ಗೀತಾ ಮಯ್ಯ, ವಿಠ್ಠಲದಾಸ್ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.