ADVERTISEMENT

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ 2021ಕ್ಕೆ ಮುಂದೂಡಿಕೆ

ಪಿಟಿಐ
Published 18 ಆಗಸ್ಟ್ 2020, 13:49 IST
Last Updated 18 ಆಗಸ್ಟ್ 2020, 13:49 IST
2019ರಲ್ಲಿ ಬ್ಯಾಂಕಾಂಕ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎದುರಾಳಿಯೊಂದಿಗೆ ಸೆಣಸುತ್ತಿರುವ ಭಾರತದ ಅಮಿತ್‌ ಪಂಗಲ್‌ (ನೀಲಿ ಪೋಷಾಕು)– ಪಿಟಿಐ ಚಿತ್ರ
2019ರಲ್ಲಿ ಬ್ಯಾಂಕಾಂಕ್‌ನಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎದುರಾಳಿಯೊಂದಿಗೆ ಸೆಣಸುತ್ತಿರುವ ಭಾರತದ ಅಮಿತ್‌ ಪಂಗಲ್‌ (ನೀಲಿ ಪೋಷಾಕು)– ಪಿಟಿಐ ಚಿತ್ರ   

ನವದೆಹಲಿ: ಭಾರತದಲ್ಲಿ ನವೆಂಬರ್‌–ಡಿಸೆಂಬರ್‌ನಲ್ಲಿ ನಿಗದಿಯಾಗಿದ್ದ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಅನ್ನು ಕೋವಿಡ್‌–19 ಹಿನ್ನೆಲೆಯಲ್ಲಿ 2021ಕ್ಕೆ ಮುಂದೂಡಲಾಗಿದೆ. ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಪ್ರಧಾನ ಕಾರ್ಯದರ್ಶಿ ಜಾಯ್‌ ಕೌಲಿ ಮಂಗಳವಾರ ಈ ವಿಷಯ ತಿಳಿಸಿದರು.

ಸೋಮವಾರ ನಡೆದ ಏಷ್ಯನ್‌ ಬಾಕ್ಸಿಂಗ್‌ ಕಾನ್ಫೆಡರೇಷನ್‌ನ (ಎಎಸ್‌ಬಿಸಿ) ಕಾರ್ಯಕಾರಿ ಮಂಡಳಿ ಸಭೆಯಲ್ಲಿಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

‘ಕೋವಿಡ್‌ ಪಿಡುಗಿನಿಂದ ಉಂಟಾದ ಬಿಕ್ಕಟ್ಟಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಾಂಪಿಯನ್‌ಷಿಪ್‌ಅನ್ನು ಮುಂದೂಡುವ ಪ್ರಸ್ತಾವ ಬಂದಿತ್ತು. ಅದನ್ನು ಅಂಗೀಕರಿಸಲಾಗಿದೆ. 2021ರಲ್ಲಿ ಟೂರ್ನಿ ನಡೆಯಲಿದ್ದು ಭಾರತವೇ ಆತಿಥ್ಯ ವಹಿಸಲಿದೆ’ ಎಂದು ಎಎಸ್‌ಬಿಸಿ ಕಾರ್ಯಕಾರಿ ಮಂಡಳಿಯ ಸದಸ್ಯರೂ ಆಗಿರುವ ಕೌಲಿ ಹೇಳಿದ್ದಾರೆ.

ADVERTISEMENT

‘2021ರ ವೇಳಾಪಟ್ಟಿಯ ಕುರಿತು ನವೆಂಬರ್‌ನಲ್ಲಿ ನಡೆಯಲಿರುವ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗುವುದು‘ ಎಂದೂ ಕೌಲಿ ನುಡಿದರು.

ಭಾರತವು1980ರಲ್ಲಿ ಕೊನೆಯ ಬಾರಿ ಏಷ್ಯನ್‌ ಕೂಟಕ್ಕೆ ಆತಿಥ್ಯ ವಹಿಸಿತ್ತು. 2003ರಲ್ಲಿ ಹಿಸ್ಸಾರ್‌ನಲ್ಲಿ ಮಹಿಳಾ ಚಾಂಪಿಯನ್‌ಷಿಪ್‌ ನಡೆದಿತ್ತು. 2019ರಿಂದ ಏಷ್ಯನ್‌ ಚಾಂಪಿಯನ್‌ಷಿಪ್‌ಅನ್ನು ಸಂಯುಕ್ತವಾಗಿ (ಪುರುಷ ಮತ್ತು ಮಹಿಳಾ) ಆಯೋಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.