ADVERTISEMENT

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ‘ಎಚ್‌‘ ಗುಂಪಿನಲ್ಲಿ ಭಾರತ ತಂಡ

ಪಿಟಿಐ
Published 8 ಆಗಸ್ಟ್ 2025, 16:17 IST
Last Updated 8 ಆಗಸ್ಟ್ 2025, 16:17 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ನವದೆಹಲಿ: ಮುಂಬರುವ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವು ಎಚ್‌ ಗುಂಪಿನಲ್ಲಿ ಕಣಕ್ಕಿಳಿಯಲಿದೆ. 

ಶುಕ್ರವಾರ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ತಂಡಗಳ ಗುಂಪುಗಳನ್ನು ಪ್ರಕಟಿಸಿದೆ. ಎರಡನೇ ಶ್ರೇಯಾಂಕದ ಭಾರತ ತಂಡವು ತನ್ನ ಗುಂಪಿನಲ್ಲಿ ಹಾಂಗ್‌ಕಾಂಗ್, ನೇಪಾಳ ಮತ್ತು ಘಾನಾದ ಎದುರು ಪೈಪೋಟಿ ನಡೆಸಲಿದೆ. 

ಗುವಾಹಟಿಯ ಅಮೀಂಗಾಂವ್‌ನಲ್ಲಿರುವ ನ್ಯಾಷನಲ್ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ನಲ್ಲಿ ಅಕ್ಟೋಬರ್ 6ರಿಂದ 11ರವರೆಗೆ ಟೂರ್ನಿ ನಡೆಯಲಿದೆ. 2007ರ ನಂತರ ಭಾರತವು ಈ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಈಗಲೇ. ವಿಶ್ವದ ಬೇರೆ ಬೇರೆ ದೇಶಗಳ 37 ತಂಡಗಳು ಸ್ಪರ್ಧಿಸಲಿವೆ.  ಸುಹಾನದಿನತಾ ಕಪ್ (ಮಿಶ್ರ ತಂಡ ವಿಭಾಗ) ವೇಳಾಪಟ್ಟಿಯನ್ನೂ ಬಿಡಬ್ಲ್ಯುಎಫ್‌ ಈ ಸಂದರ್ಭದಲ್ಲಿ ಬಿಡುಗಡೆ ಮಾಡಿತು.

ADVERTISEMENT

ಎಂಟು ವಿಭಾಗಗಳಲ್ಲಿ ತಂಡಗಳನ್ನು ವಿಭಜಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ತಂಡವು ಕ್ವಾರ್ಟರ್‌ಫೈನಲ್ ಪ್ರವೇಶಿಸಲಿದೆ.  ಅಗ್ರಶ್ರೇಯಾಂಕದ ಥಾಯ್ಲೆಂಡ್ ಎ ಗುಂಪಿನಲ್ಲಿದೆ. ಅದರೊಂದಿಗೆ ಡೆನ್ಮಾರ್ಕ್, ಸ್ಲೋವೆನಿಯಾ ಮತ್ತು ಕುಕ್ ಐಲ್ಯಾಂಡ್ಸ್‌ ಕೂಡ ಇವೆ. 

ಹಾಲಿ ಚಾಂಪಿಯನ್ ಇಂಡೊನೇಷ್ಯಾ ತಂಡವು ಸಿ ಗುಂಪಿನಲ್ಲಿದೆ. ಟರ್ಕಿ, ರೊಮೆನಿಯಾ ಮತ್ತು ನೆದರ್ಲೆಂಡ್ಸ್ ತಂಡಗಳು ಕೂಡ ಇದೇ ಗುಂಪಿನಲ್ಲಿವೆ. ಇ ಗುಂಪಿನಲ್ಲಿರುವ 14 ಬಾರಿಯ ಚಾಂಪಿಯನ್ ಚೀನಾ ತಂಡವು ಜಪಾನ್, ಸಿಂಗಪುರ, ಬ್ರೆಜಿಲ್ ಮತ್ತು ಭೂತಾನ್ ವಿರುದ್ಧ ಸೆಣಸಲಿದೆ. 

ಈ ಬಾರಿ ಹೊಸ ರಿಲೇ ಫಾರ್ಮ್ಯಾಟ್‌ ಪ್ರಯೋಗ ನಡೆಯಲಿದೆ. ಈ ಮಾದರಿಯಲ್ಲಿ ಮೂರು ಗೇಮ್‌ಗಳಿರುತ್ತವೆ.  ಅದರಲ್ಲಿ ರಿಲೆ ಫಾರ್ಮ್ಯಾಟ್‌ನಲ್ಲಿ 45 ಪಾಯಿಂಟ್‌ಗಳನ್ನು ಮೊದಲು ಗಳಿಸುವ ತಂಡವು ವಿಜಯಿಯಾಗವುದು. ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಈ ಮೊದಲು ರಿಲೆ ಫಾರ್ಮ್ಯಾಟ್‌ ನಲ್ಲಿ ಸಿಂಗಲ್ಸ್ ಸೆಟ್  10 ಪಂದ್ಯಗಳ 110 ಪಾಯಿಂಟ್ಸ್‌ಗಳದ್ದಾಗಿತ್ತು. 

ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ; ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್‌ಷಿಪ್ (2025) ಪದಕ ಜಯಿಸಿದವರಿಗೆ ನೇರಪ್ರವೇಶ ಸಿಗಲಿದೆ. ಉಳಿದ ಸ್ಥಾನಗಳನ್ನು ಆಯ್ಕೆ ಪ್ರಕ್ರಿಯೆ ಮೂಲಕ ನಿರ್ಧರಿಸಲಾಗುವುದು. ಆ. 9 ರಿಂದ 13ರವರೆಗೆ ಆಯ್ಕೆ ಟ್ರಯಲ್ಸ್ ನಡೆಯಲಿದೆ. ಬಿಎಐ ರ‍್ಯಾಂಕಿಂಗ್ ಆಧಾರದ ಮೇಲೆ ಆಯ್ಕೆಗೆ ಪರಿಗಣಿಸಲಾಗುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.