ADVERTISEMENT

ವಿಶ್ವ ಬ್ಯಾಡ್ಮಿಂಟನ್‌ ಫೈನಲ್ಸ್‌: ಪ್ರಶಸ್ತಿ ಉಳಿಸಿಕೊಳ್ಳುವರೇ ಸಿಂಧು?

ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಬ್ಯಾಡ್ಮಿಂಟನ್‌ ಫೈನಲ್ಸ್

ಏಜೆನ್ಸೀಸ್
Published 10 ಡಿಸೆಂಬರ್ 2019, 13:11 IST
Last Updated 10 ಡಿಸೆಂಬರ್ 2019, 13:11 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಗುವಾಂಗ್‌ಜು: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಬಳಿಕ ಭಾರತದ ಪಿ.ವಿ.ಸಿಂಧು ಪ್ರಶಸ್ತಿಯ ಬರ ಎದುರಿಸುತ್ತಿದ್ದಾರೆ.ಬುಧವಾರ ಇಲ್ಲಿ ಆರಂಭವಾಗುವ ಬಿಡಬ್ಲ್ಯುಎಫ್‌ ಟೂರ್‌ ವಿಶ್ವ ಬ್ಯಾಡ್ಮಿಂಟನ್‌ ಫೈನಲ್ಸ್‌ನಲ್ಲಿಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಕಣಕ್ಕಿಳಿಯಲಿರುವ ಅವರು ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಆಗಸ್ಟ್‌ ತಿಂಗಳಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಟ್ರೋಫಿಗೆ ಮುತ್ತಿಕ್ಕಿದ್ದರು. 2016ರ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಕೊರಿಯಾ ಹಾಗೂ ಫುಜು ಚೀನಾ ಓಪನ್‌ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದರು. ಚೀನಾ ಓಪನ್‌ ಸೂಪರ್‌ 1000, ಡೆನ್ಮಾರ್ಕ್‌ ಓಪನ್‌ ಹಾಗೂ ಹಾಂಗ್‌ಕಾಂಗ್‌ ಟೂರ್ನಿಗಳಲ್ಲಿ ಎರಡನೇ ಸುತ್ತುಗಳಲ್ಲೇ ಅವರ ಅಭಿಯಾನ ಅಂತ್ಯವಾಗಿತ್ತು.

ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಮಾತ್ರ ಕ್ವಾರ್ಟರ್‌ಫೈನಲ್‌ವರೆಗೆ ಕಾಲಿಟ್ಟಿದ್ದರು.

ADVERTISEMENT

ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನ ಅಗ್ರ 8 ಸ್ಥಾನಗಳಲ್ಲಿರುವವರು ಮಾತ್ರ ವಿಶ್ವ ಟೂರ್‌ ಫೈನಲ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಸಿಂಧು ವರ್ಷಾಂತ್ಯದಲ್ಲಿ 15ನೇ ಕ್ರಮಾಂಕ ಗಳಿಸಿದ್ದಾರೆ. ಆದರೆ ವಿಶ್ವ ಚಾಂಪಿಯನ್‌ ಆಗಿರುವ ಕಾರಣ ಅವರಿಗೆ ಮಹಿಳಾ ಸಿಂಗಲ್ಸ್‌ನಲ್ಲಿ ಆಡುವ ಅವಕಾಶ ಲಭಿಸಿದೆ.

ವಿಶ್ವ ಟೂರ್‌ ಫೈನಲ್ಸ್‌ಗೆ ಸಜ್ಜುಗೊಳ್ಳುವ ಉದ್ದೇಶದಿಂದ ಹಾಂಗ್‌ಕಾಂಗ್‌ ಓಪನ್‌ ಟೂರ್ನಿಯಲ್ಲಿ ಅವರು ಆಡಿರಲಿಲ್ಲ. ವಿಶ್ವ ಟೂರ್‌ ಫೈನಲ್ಸ್‌ನ 2017ರ ಆವೃತ್ತಿಯಲ್ಲಿ ಅವರು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದರು. 2018ರಲ್ಲಿ ಚಾಂಪಿಯನ್‌ ಆಗಿದ್ದರು.

ಈ ಬಾರಿ ಭಾರತದ ಆಟಗಾರ್ತಿ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಗುಂಪಿನಲ್ಲಿ ಚೀನಾ ಜೋಡಿ ಚೆನ್‌ ಯು ಫೆಯಿ ಹಾಗೂ ಹೆ ಬಿಂಗ್‌ ಜಿಯಾವೊ, ಜಪಾನ್‌ನ ಅಕಾನೆ ಯಮಗುಚಿ ಕೂಡ ಇದ್ದಾರೆ. ತೈವಾನ್‌ನ ತೈ ಜು ಯಿಂಗ್‌, ಥಾಯ್ಲೆಂಡ್‌ನ ಜೋಡಿ ರಚನೊಕ್‌ ಇಂತನಾನ್‌ ಹಾಗೂ ಬುಸಾನನ್‌ ಒಂಗ್‌ಬಮ್ರುಂಗ್‌ಪನ್‌ ಮತ್ತು ಜಪಾನ್‌ನ ನೊಜೊಮಿ ಒಕುಹರಾ ಅವರನ್ನು ‘ಬಿ’ ಗುಂಪು ಒಳಗೊಂಡಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಸಿಂಧು, ಮೊದಲ ಪಂದ್ಯದಲ್ಲಿ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ. ಈವರೆಗೆ ಯಮಗುಚಿ ಅವರನ್ನು ಸಿಂಧು 10 ಬಾರಿ ಸೋಲಿಸಿದ್ದರೆ, ಆರು ಬಾರಿ ಅವರಿಗೆ ಮಣಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.