ADVERTISEMENT

ಮತ್ತೊಂದು ವಿಶ್ವದಾಖಲೆ ಸ್ಥಾಪಿಸಿದ ಈಜು ತಾರೆ ಸಮ್ಮರ್‌ ಮೆಕಿಂತೋಷ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 14:41 IST
Last Updated 12 ಜೂನ್ 2025, 14:41 IST
ಮೆಕಿಂತೋಷ್
ಮೆಕಿಂತೋಷ್   

ಮಾಂಟ್ರಿಯಲ್: ಈಜು ತಾರೆ ಸಮ್ಮರ್‌ ಮೆಕಿಂತೋಷ್‌ ಅವರು ಆರು ದಿನಗಳಲ್ಲಿ ಮೂರನೇ ವಿಶ್ವದಾಖಲೆ ಸ್ಥಾಪಿಸಿದರು. ವಿಕ್ಟೋರಿಯಾದಲ್ಲಿ ನಡೆಯುತ್ತಿರುವ ಕೆನಡಿಯನ್ ಈಜು ಟ್ರಯಲ್ಸ್‌ನ 400 ಮೀ. ಮೆಡ್ಲೆ ಸ್ಪರ್ಧೆಯನ್ನು ಅವರು 4ನಿ.23.65 ಸೆ.ಗಳಲ್ಲಿ ಕ್ರಮಿಸಿ ತಮ್ಮದೇ ದಾಖಲೆಯನ್ನು ಸುಧಾರಿಸಿದರು.

ಮೂರು ಬಾರಿ ಒಲಿಂಪಿಕ್ ಸ್ವರ್ಣ ಗೆದ್ದಿರುವ 18 ವರ್ಷ ವಯಸ್ಸಿನ ಈ ಪ್ರತಿಭಾನ್ವಿತೆ, ಮುಂದಿನ ತಿಂಗಳು ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ಗೆ ಭರ್ಜರಿಯಾಗಿ ಸಜ್ಜಾಗಿದ್ದಾರೆ.

ಸಮ್ಮರ್‌ ಈ ಹಿಂದಿನ (4:24.38) ದಾಖಲೆಯನ್ನು 2024ರ ಮೇ ತಿಂಗಳಲ್ಲಿ ಟೊರಾಂಟೊದಲ್ಲಿ ನಡೆದ ಕೆನಡಿಯನ್ ಒಲಿಂಪಿಕ್ ಟ್ರಯಲ್ಸ್‌ನಲ್ಲಿ ಸ್ಥಾಪಿಸಿದ್ದರು.

ADVERTISEMENT

ಅವರು ಸರಾಗವಾಗಿ ಈಜಿದರು. ಮೆಡ್ಲೆ ಸ್ಪರ್ಧೆಯ ಮೊದಲ ಭಾಗವಾದ ಬಟರ್‌ಫ್ಲೈ ಲೆಗ್‌ಅನ್ನು ವಿಶ್ವದಾಖಲೆ ಅವಧಿಯಲ್ಲಿ ಪೂರೈಸಿದರು. ಸ್ಪರ್ಧೆಯ ಅರ್ಧಭಾಗ ಮುಗಿದಾಗ ವಿಶ್ವದಾಖಲೆಗಿಂತ ಒಂದು ಸೆಕೆಂಡಿಗಿಂತ ಮುನ್ನಡೆ ಸಾಧಿಸಿದ್ದರು. ಕೊನೆಯ ಭಾಗವಾದ ಫ್ರೀಸ್ಟೈಲ್‌ ಈಜನ್ನು ಶರವೇಗದಲ್ಲಿ ಮುಗಿಸಿದರು.

ಕಳೆದ ಶನಿವಾರ ಅವರು ಮಹಿಳೆಯರ 400 ಮೀ. ಫ್ರೀಸ್ಟೈಲ್‌ನಲ್ಲಿ ವಿಶ್ವದಾಖಲೆ ಸ್ಥಾಪಿಸಿ ಅರಿಯರ್ನ್ ಟಿಟ್ಮಸ್‌ ಹೆಸರಿನಲ್ಲಿದ್ದ ದಾಖಲೆ ಮುಳುಗಿಸಿದ್ದರು. ಭಾನುವಾರ 800 ಮೀ. ಫ್ರೀಸ್ಟೈಲ್‌ ಇತಿಹಾಸದಲ್ಲಿ ಮೂರನೇ ಅತಿ ವೇಗದ ಅವಧಿ ದಾಖಲಿಸಿದ್ದರು. ಸೋಮವಾರ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ಹಂಗೆರಿಯ ಕತಿಂಕ ಹೊಸ್ಜು ಹೆಸರಿನಲ್ಲಿದ್ದ ದಾಖಲೆ ಮುಳುಗಿಸಿದ್ದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೆಕಿಂತೋಷ್‌ ಅವರು 200 ಮೀ. ಬಟರ್‌ಫ್ಲೈ, 200 ಮೀ. ಮೆಡ್ಲೆ ಮತ್ತು 400 ಮೀ. ಮೆಡ್ಲೆ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಈ ಹಿಂದೆ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.