ADVERTISEMENT

ಡೋಪಿಂಗ್‌: ಮಾರಿಮುತ್ತು ಮನವಿ ತಿರಸ್ಕಾರ

ಪಿಟಿಐ
Published 5 ಮೇ 2021, 13:42 IST
Last Updated 5 ಮೇ 2021, 13:42 IST
ಗೋಮತಿ ಮಾರಿಮುತ್ತು –ಎಎಫ್‌ಪಿ ಚಿತ್ರ
ಗೋಮತಿ ಮಾರಿಮುತ್ತು –ಎಎಫ್‌ಪಿ ಚಿತ್ರ   

ನವದೆಹಲಿ: ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿ ನಾಲ್ಕು ವರ್ಷಗಳ ಅಮಾನತಿಗೆ ಒಳಗಾಗಿರುವ ಭಾರತದ ಮಧ್ಯಮ ಅಂತರದ ಓಟಗಾರ್ತಿ ಗೋಮತಿ ಮಾರಿಮುತ್ತು ಶಿಕ್ಷೆ ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿ ತಿರಸ್ಕಾರಗೊಂಡಿದೆ.

32 ವರ್ಷದ ಗೋಮತಿ ಅವರನ್ನು 2019ರ ಮೇ 17ರಂದು ಅಮಾನತು ಮಾಡಲಾಗಿತ್ತು. ಶಿಕ್ಷೆ 2023ರ ಮೇ 16ರ ವರೆಗೆ ಜಾರಿಯಲ್ಲಿರುತ್ತದೆ. ಇದರ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಕ್ರೀಡಾ ನ್ಯಾಯಾಲಯ ಬುಧವಾರ ತಳ್ಳಿ ಹಾಕಿದೆ.

2019ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನ 800 ಮೀಟರ್ಸ್ ಓಟದಲ್ಲಿ ಗೋಮತಿ ಚಿನ್ನ ಗೆದ್ದಿದ್ದರು. ಆ ವರ್ಷದ ಏಪ್ರಿಲ್ 22ರಂದು ಅವರ ಮೂತ್ರದ ಮಾದರಿ ಸಂಗ್ರಹಿಸಲಾಗಿತ್ತು. ಅದರಲ್ಲಿ ನಿಷೇಧಿತ ನೊರಾಂಡ್ರೊಸ್ಟೆರಾನ್ ಇರುವುದು ಪತ್ತೆಯಾಗಿತ್ತು. ಹೀಗಾಗಿ ಕಳೆದ ಮೇ 26ರಂದು ಪದಕವನ್ನು ವಾಪಸ್ ಪಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಶಿಸ್ತು ನ್ಯಾಯಾಧಿಕರಣ ಅಮಾನತು ಶಿಕ್ಷೆಯನ್ನೂ ವಿಧಿಸಿತ್ತು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಕ್ರೀಡಾ ನ್ಯಾಯಾಲಯದ ಪ್ರೊ. ಜಾನ್ ಪೌಲ್ಸನ್ ಅವರು ಗೋಮತಿ ತಪ್ಪಿತಸ್ಥೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆ ಅನುಭವಿಸಲೇಬೇಕು ಎಂದು ತೀರ್ಪು ನೀಡಿದರು. 2019ರ ಮಾರ್ಚ್ 18ರಿಂದ ಮೇ 17ರ ವರೆಗೆ ಅವರು ಗಳಿಸಿರುವ ಪದಕಗಳೆಲ್ಲವೂ ಅನೂರ್ಜಿತ ಎಂದು ಕೂಡ ಹೇಳಿದರು.

ಮಾರ್ಚ್ 18ರಂದು ಪಟಿಯಾಲದಲ್ಲಿ ನಡೆದ ಫೆಡರೇಷನ್ ಕಪ್‌ ಮತ್ತು ಏಪ್ರಿಲ್ 13ರಂದು ಪಟಿಯಾಲದಲ್ಲಿ ನಡೆದ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲೂ ಅವರು ಪಾಲ್ಗೊಂಡಿದ್ದರು. ಅವುಗಳಿಗೆ ಸಂಬಂಧಿಸಿದ ಪರೀಕ್ಷೆಯಲ್ಲೂ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿತ್ತು.

ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಗೋಮತಿ ತಾವು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದು ಗರ್ಭಪಾತವೂ ಆಗಿತ್ತು. ಈ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಮೂತ್ರದಲ್ಲಿ ನೊರಾಂಡ್ರೊಸ್ಟೆರಾನ್ ಶೇಖರಣೆ ಆಗಿರುವ ಸಾಧ್ಯತೆ ಇದೆ ಎಂದು ವಾದಿಸಿದ್ದರು. ಪರೀಕ್ಷಾ ವಿಧಾನದ ಕುರಿತು ಸಂದೇಹವನ್ನೂ ವ್ಯಕ್ತಪಡಿಸಿದ್ದರು. ಆದರೆ ಅದನ್ನೆಲ್ಲ ನ್ಯಾಯಾಲಯ ನಿರಾಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.