ADVERTISEMENT

ಡಿಸ್ಕಸ್ ಥ್ರೋ ಕ್ರೀಡಾಪಟುವಿಗೆ ಏಷ್ಯನ್‌ ಕ್ರೀಡಾಕೂಟದ ಕನಸು..!

ಡಾ.ರಮೇಶ ಎಸ್.ಕತ್ತಿ
Published 11 ಸೆಪ್ಟೆಂಬರ್ 2018, 13:37 IST
Last Updated 11 ಸೆಪ್ಟೆಂಬರ್ 2018, 13:37 IST
ಡಿಸ್ಕಸ್‌ ಥ್ರೋ ಅಭ್ಯಾಸನಿರತ ಜಗನ್ನಾಥ ಪಾಟೀಲ
ಡಿಸ್ಕಸ್‌ ಥ್ರೋ ಅಭ್ಯಾಸನಿರತ ಜಗನ್ನಾಥ ಪಾಟೀಲ   

ಆಲಮೇಲ:ಮಗ ಕ್ರೀಡಾಪಟು ಆಗಬೇಕೆಂಬುದು ತಂದೆಯ ಆಸೆ. ಮಗನಿಗೆ ತಂದೆಯ ಕನಸು ನನಸು ಮಾಡುವ ಬಯಕೆ. ಇದರ ಫಲವೇ ಜಗನ್ನಾಥ ಪಾಟೀಲ ಹಲ ಪದಕ ಗೆದ್ದು, ಸಾಧನೆಗೈದಿದ್ದಾನೆ.

ಇಲ್ಲಿಗೆ ಸಮೀಪದ ಆಸಂಗಿಹಾಳ ಗ್ರಾಮದ ಯುವಕ ಇದೀಗ ಮೂಡಬಿದರೆಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದು, ಕ್ರೀಡೆಯನ್ನೂ ಮುಂದುವರೆಸಿದ್ದಾನೆ. ರಾಷ್ಟ್ರ–ರಾಜ್ಯ ಮಟ್ಟದ ಹಲ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾನೆ.

ಆರಂಭದ ದಿನಗಳಲ್ಲಿ ಬೆಳಗಾವಿಯ ಚಂದರಗಿ ಕ್ರೀಡಾಶಾಲೆಯಲ್ಲಿ ಕೊಕ್ಕೊ, ರಿಲೆ ತಂಡಗಳಲ್ಲಿ ಭಾಗವಹಿಸಿ, ನಂತರದಲ್ಲಿ ಚಕ್ರ ಎಸೆತ, ಗುಂಡು ಎಸೆತದತ್ತ ಗಮನ ಕೇಂದ್ರೀಕರಿಸಿದ ಜಗನ್ನಾಥ. ಇವುಗಳಲ್ಲೇ ಸಾಧನೆ ಮಾಡಬೇಕೆಂಬ ಛಲ ಹೊಂದಿದ.

ADVERTISEMENT

ಅಲ್ಲಿಂದ ಶುರುವಾಯಿತು ಪದಕದ ಬೇಟೆ. 2013ರಿಂದ ಈಚೆಗೆ ನಡೆದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ದಾಖಲೆಗೈದಿದ್ದಾನೆ. ಚಂದರಗಿ ಶಾಲೆಯ ತರಬೇತುದಾರ ಆರ್.ಕೆ.ಫಡತಾರೆ, ಆಳ್ವಾಸ್‌ನ ತರಬೇತುದಾರ ರವಿ ಅವರ ಮಾರ್ಗದರ್ಶನವೇ ನನ್ನ ಅತ್ಯಲ್ಪ ಸಾಧನೆಗೆ ಕಾರಣ ಎನ್ನುತ್ತಾನೆ.

ಆಂಧ್ರಪ್ರದೇಶದ ಮಹೆಬೂಬ ನಗರ, ಜಾರ್ಖಂಡ್‌, ಉತ್ತರಪ್ರದೇಶ, ತೆಲಂಗಾಣ, ಕೇರಳದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆದ್ದ ಹಿರಿಮೆ ಈತನದ್ದು.

ಮೂಡಬಿದರೆಯಲ್ಲಿ ಅಭ್ಯಾಸದಲ್ಲಿ ತಲ್ಲೀನರಾಗಿರುವ ಜಗನ್ನಾಥ ‘ಸಾಧನೆಗಾಗಿ ಇಲ್ಲಿಗೆ ಬಂದಿರುವೆ. ಮುಂದೊಂದು ದಿನ ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕ ಗೆಲ್ಲುವ ವಿಶ್ವಾಸವಿದೆ. ತಂದೆಯ ಆಸೆ ಪೂರೈಸುವ ಕನಸಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪದಕಗಳ ರಾಶಿ

19 ವರ್ಷದ ಈ ಪೋರನ ಸಾಧನೆ ಕಮ್ಮಿಯಿಲ್ಲ. ಈತನ ಮನೆ ಹೊಕ್ಕರೆ ಸಿಕ್ಕುವುದು ಪದಕಗಳ ರಾಶಿ, ತಾಲ್ಲೂಕು, ಜಿಲ್ಲಾ ಹಂತದ ಕ್ರೀಡಾಕೂಟ ಹೊರತುಪಡಿಸಿ ಗಳಿಸಿದ ಪದಕಗಳು, ಪ್ರಶಸ್ತಿಪತ್ರಗಳ ಸಂಖ್ಯೆಯೇ 50 ದಾಟಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ 2015ರಲ್ಲಿ ಮಂಗಳೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ ಗರಿ ಜಗನ್ನಾಥನದ್ದು. 2013ರಲ್ಲಿ ಯುವಜನ ಸೇವೆ ಕ್ರೀಡಾ ಇಲಾಖೆ ನಡೆಸಿದ ರಾಜ್ಯಮಟ್ಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಮೊದಲ ಬಹುಮಾನ, ಗುಂಡು ಎಸೆತದಲ್ಲಿ ಮೂರನೇ ಸ್ಥಾನ.

ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್‌ 2014ರಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಚಕ್ರ ಎಸೆತ (ಡಿಸ್ಕಸ್ ಥ್ರೋ) ಸ್ಪರ್ಧೆಯಲ್ಲಿ 39.55 ಮೀಟರ್ ದೂರ ಎಸೆದು 2ನೇ ಸ್ಥಾನ ಪಡೆದ. 30ನೇ ರಾಜ್ಯ ಜ್ಯೂನಿಯರ್ ಅಂತರ ಜಿಲ್ಲೆಗಳ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜಿ ಎಸೆತದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ.

ಪದವಿ ಪೂರ್ವಶಿಕ್ಷಣ ಇಲಾಖೆ 2016ರಲ್ಲಿ ಕಲಬುರಗಿಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಕ್ರ ಎಸೆತದಲ್ಲಿ 3ನೇ ಸ್ಥಾನ ಪಡೆದ. ವಿಜಯಪುರದಲ್ಲಿ 2014ರಲ್ಲಿ ನಡೆದ ರಾಜ್ಯ ಕಿರಿಯರ ಅಥ್ಲೆಟಿಕ್ಸ್‌ನಲ್ಲಿ 2ನೇ ಸ್ಥಾನ, ಬಾಗಲಕೋಟೆಯಲ್ಲಿ ನಡೆದ ರಾಜ್ಯ ಕಿರಿಯರ ವಿಭಾಗ ಚಕ್ರ ಎಸೆತದಲ್ಲೂ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನೂ ವಿಭಾಗ, ಜಿಲ್ಲಾ, ತಾಲ್ಲೂಕು ಮಟ್ಟ, ವಿವಿಧ ಸಂಸ್ಥೆಗಳು ಏರ್ಪಡಿಸಿದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪಡೆದ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳ ದೊಡ್ಡ ರಾಶಿಯೇ ಇದೆ.

2015ರಲ್ಲಿ ಜಾರ್ಖಂಡ್‌ನಲ್ಲಿ ನಡೆದ 60ನೇ ರಾಷ್ಟ್ರೀಯ ಶಾಲಾ ಆಟೋಟಗಳ ಸ್ಪರ್ಧೆ, 2016ರಲ್ಲಿ ಕೇರಳದ ಖೊಜಿಕೊಡೆಯಲ್ಲಿ ನಡೆದ 61ನೇ ರಾಷ್ಟ್ರೀಯ ಶಾಲಾ ಆಟೋಟಗಳ ಸ್ಪರ್ಧೆಯಲ್ಲೂ ಭಾಗಿಯಾಗಿದ್ದಾನೆ. ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶಗಳಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕೀರ್ತಿ ಜಗನ್ನಾಥನದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.