ಚೆನ್ನೈ: ಭಾರತದ ನಿಹಾಲ್ ಸರಿನ್, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ವಿಶ್ವದ ಐದನೇ ಕ್ರಮಾಂಕದ ಆಟಗಾರ ಹಾಗೂ ಇಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಅರ್ಜುನ್ ಇರಿಗೇಶಿ ಅವರಿಗೆ ಆಘಾತ ನೀಡಿದರು.
ಇದು ನಿಹಾಲ್‌ಗೆ ಟೂರ್ನಿಯ ಮೊದಲ ಜಯ ಹಾಗೂ ಅರ್ಜುನ್‌ಗೆ ಮೊದಲ ಸೋಲು. ಜರ್ಮನಿಯ ವಿನ್ಸೆಂಟ್ ಕೀಮರ್ ಭಾನುವಾರದ ಕೊನೆಗೆ 3.5 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಈ ಸೋಲಿನ ಹೊರತಾಗಿಯೂ ಇರಿಗೇಶಿ 2.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಒಟ್ಟು ಒಂಬತ್ತು ಸುತ್ತುಗಳ ರೌಂಡ್ ರಾಬಿನ್ ಮಾದರಿಯ (ಕ್ಲಾಸಿಕಲ್ ಶೈಲಿಯ) ಸ್ಪರ್ಧೆ ನಡೆಯಲಿದೆ.
ನಿಹಾಲ್ (1.5) ಮತ್ತು ಇರಿಗೇಶಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 70ನೇ ನಡೆಯಲ್ಲಿ ನಿಹಾಲ್ ಗೆಲುವಿನ ನಗೆ ಬೀರಿದರು. ಕೀಮರ್ ಅವರು ಡಚ್ ತಾರೆ ಅನೀಶ್ ಗಿರಿ (2) ಅವರೊಂದಿಗೆ ಡ್ರಾ ಮಾಡಿಕೊಂಡರು.
ಉಳಿದಂತೆ, ಮುರಳಿ ಕಾರ್ತಿಕೇಯನ್ (2) ಅವರು ನೆದರ್ಲೆಂಡ್ಸ್‌ನ ಜೋರ್ಡನ್ ವಾನ್ ಫೊರೀಸ್ಟ್ (1) ಅವರನ್ನು ಮಣಿಸಿದರು. ಭಾರತದ ಆಟಗಾರರ ವ್ಯವಹಾರವಾಗಿದ್ದ ಪಂದ್ಯದಲ್ಲಿ ವಿದಿತ್ ಗುಜರಾತಿ (2) ಮತ್ತು ಪ್ರಣವ್ ವಿ. (1.5) ಅವರು ಅಂಕಗಳನ್ನು ಹಂಚಿಕೊಂಡರು. ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಅವಾಂಡರ್ ಲಿಯಾಂಗ್ (2) ಮತ್ತು ರೇ ರಾಬ್ಸನ್ (2) ಅವರೂ ಡ್ರಾ ಮಾಡಿಕೊಂಡರು.
ಚಾಲೆಂಜರ್ಸ್ ವಿಭಾಗದಲ್ಲಿ ಅಭಿಮನ್ಯು ಪುರಾಣಿಕ್ (3.5) ಸ್ವದೇಶದ ವೈಶಾಲಿ ರಮೇಶ್‌ಬಾಬು (1) ಅವರನ್ನು ಸೋಲಿಸಿ ಉತ್ತಮ ಪ್ರದರ್ಶನ ಮುಂದುವರಿಸಿದರು.
ಪ್ರಾಣೇಶ್ (3) ಅವರು ಸ್ವದೇಶದ ಬಿ.ಅಧಿಬನ್ (2) ಅವರೊಂದಿಗೆ ಡ್ರಾ ಮಾಡಿಕೊಂಡರು. ದೀಪ್ತಾಯನ್ ಘೋಷ್ (3) ಅವರು ಹರ್ಷವರ್ಧನ್ ಜಿ.ಬಿ. (0.5) ಅವರನ್ನು ಮಣಿಸಿದರು. ಲಿಯಾನ್ ಮೆಂಡೋನ್ಸಾ (3) ಅವರು ಡಿ. ಹಾರಿಕಾ (0.5) ಅವರನ್ನು ಮಣಿಸಿದರು. ಇನಿಯನ್ (2.5) ಅವರು ಆರ್ಯನ್ ಚೋಪ್ರಾ (1) ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.