ADVERTISEMENT

ಆನಂದ್‌ಗೆ ಮೂರನೇ ಸ್ಥಾನ

ನಾರ್ವೆ ಚೆಸ್: ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 11:06 IST
Last Updated 11 ಜೂನ್ 2022, 11:06 IST

ಸ್ಟಾವೆಂಜರ್‌, ನಾರ್ವೆ (ಪಿಟಿಐ): ಭಾರತದ ವಿಶ್ವನಾಥನ್‌ ಆನಂದ್‌ ಅವರು ಇಲ್ಲಿ ಕೊನೆಗೊಂಡ ನಾರ್ವೆ ಚೆಸ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡರು. ಮ್ಯಾಗ್ನಸ್‌ ಕಾರ್ಲ್‌ಸನ್‌ ಪ್ರಶಸ್ತಿ ಗೆದ್ದರು.

ಶನಿವಾರ ನಡೆದ ಒಂಬತ್ತನೇ ಹಾಗೂ ಕೊನೆಯ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌, ನಾರ್ವೆಯ ಆರ್ಯನ್‌ ತರಿ ವಿರುದ್ಧ ಗೆದ್ದರು. ಇವರ ನಡುವಿನ ಕ್ಲಾಸಿಕಲ್‌ ಪಂದ್ಯ 22 ನಡೆಗಳ ಬಳಿಕ ಡ್ರಾದಲ್ಲಿ ಕೊನೆಗೊಂಡರೆ, ಆರ್ಮಗೆಡನ್ (ಸಡನ್‌ ಡೆತ್‌) ಗೇಮ್‌ನಲ್ಲಿ ಆನಂದ್ 87 ನಡೆಗಳಲ್ಲಿ ಜಯ ಸಾಧಿಸಿದರು.

ಆನಂದ್ ಒಟ್ಟು 14.5 ಪಾಯಿಂಟ್‌ಗಳನ್ನು ಕಲೆಹಾಕಿದರು. ನಾರ್ವೆಯ ಕಾರ್ಲ್‌ಸನ್‌ (16.5 ಪಾಯಿಂಟ್ಸ್) ಚಾಂಪಿಯನ್‌ ಆದರೆ, ಅಜರ್‌ಬೈಜಾನ್‌ನ ಶಕ್ರಿಯಾರ್‌ ಮಮೆದ್ಯರೊವ್ (15.5) ಎರಡನೇ ಸ್ಥಾನ ಗಳಿಸಿದರು.

ADVERTISEMENT

ಆನಂದ್‌ ಈ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದರಲ್ಲದೆ, ಮೊದಲ ಮೂರು ಸುತ್ತುಗಳಲ್ಲಿ ಜಯ ಸಾಧಿಸಿದ್ದರು. ಐದನೇ ಸುತ್ತಿನಲ್ಲಿ ಕಾರ್ಲ್‌ಸನ್‌ಗೆ ಆಘಾತ ನೀಡಿ ಅಗ್ರಸ್ಥಾನಕ್ಕೇರಿದ್ದರು. ಬಳಿಕದ ನಾಲ್ಕು ಸುತ್ತುಗಳಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಇದರಿಂದ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡರು.

ಕಾರ್ಲ್‌ಸನ್‌ ಕೊನೆಯ ಸುತ್ತಿನಲ್ಲಿ ಬ‌ಲ್ಗೇರಿಯದ ವ್ಯಾಸೆಲಿನ್‌ ಟೊಪಾಲೊವ್‌ ಜತೆ ಡ್ರಾ ಸಾಧಿಸಿದರು.

ಅಂತಿಮ ಸ್ಥಾನ ಹೀಗಿದೆ: 1.ಮ್ಯಾಗ್ನಸ್‌ ಕಾರ್ಲ್‌ಸನ್‌ (ನಾರ್ವೆ, 16.5 ಪಾಯಿಂಟ್ಸ್), 2. ಶಕ್ರಿಯಾರ್‌ ಮಮೆದ್ಯರೊವ್ (ಅಜರ್‌ಬೈಜಾನ್, 15.5), 3. ವಿಶ್ವನಾಥನ್‌ ಆನಂದ್ (ಭಾರತ, 14.5), 4.ಮ್ಯಾಕ್ಸಿಮ್‌ ವಾಶಿರ್‌ ಲಗ್ರಾವ್ (ಫ್ರಾನ್ಸ್, 14), 5. ವೆಸ್ಲಿ ಸೊ (ಅಮೆರಿಕ, 12.5), 6.ಅನೀಶ್‌ ಗಿರಿ (ನೆದರ್ಲೆಂಡ್ಸ್, 12), 7.ವ್ಯಾಸೆಲಿನ್‌ ಟೊಪಾಲೊವ್ (ಬಲ್ಗೇರಿಯ, 9.5), 8.ಆರ್ಯನ್‌ ತರಿ (ನಾರ್ವೆ, 9.5), 9.ತೈಮೂರ್‌ ರಜಬೊವ್ (ಅಜರ್‌ಬೈಜಾನ್, 8), 10.ವಾಂಗ್‌ ಹವೊ (ಚೀನಾ, 7.5)

ಪ್ರಜ್ಞಾನಂದಗೆ ಪ್ರಶಸ್ತಿ

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ, ನಾರ್ವೆ ಚೆಸ್‌ ಟೂರ್ನಿಯ ’ಎ‘ ಗುಂಪಿನಲ್ಲಿ ಚಾಂಪಿಯನ್‌ ಆದರು. ಒಂಬತ್ತು ಸುತ್ತುಗಳಲ್ಲಿ ಅವರು ಒಟ್ಟು 7.5 ಪಾಯಿಂಟ್ಸ್‌ ಕಲೆಹಾಕಿದರು.

ಇಸ್ರೇಲ್‌ನ ಮಾರ್ಸೆಲ್‌ ಎಫ್ರೊಮ್‌ಸ್ಕಿ ಮತ್ತು ಸ್ವೀಡನ್‌ನ ಜುಂಗ್‌ ಮಿನ್‌ ಸಿಯೊ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು. ಭಾರತದ ಇನ್ನೊಬ್ಬ ಆಟಗಾರ ಪ್ರಣೀತ್‌ ಆರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.