ADVERTISEMENT

ಹುಬ್ಬಳ್ಳಿಯ ಚದುರಂಗದ ಚತುರೆ ತನಿಷಾ...

ಪ್ರಮೋದ ಜಿ.ಕೆ
Published 9 ಜುಲೈ 2019, 19:45 IST
Last Updated 9 ಜುಲೈ 2019, 19:45 IST
ತನಿಷಾ ಗೋಟಡ್ಕಿ
ತನಿಷಾ ಗೋಟಡ್ಕಿ   

ಮನೋಸ್ಥೈರ್ಯ ಮತ್ತು ಯೋಚನಾ ಕ್ರಮದ ಕೌಶಲ ಹೆಚ್ಚಿಸುವ ಚೆಸ್‌ನಲ್ಲಿ ಹುಬ್ಬಳ್ಳಿಯ ಸ್ಪರ್ಧಿಗಳು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಚದುರಂಗದ ಅನುಭವ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರ ಸಾಲಿನಲ್ಲಿ ಈಗ ತನಿಷಾ ಶೀತಲ್‌ ಗೋಟಡ್ಕಿ ಹೊಸ ಭರವಸೆಯಾಗಿ ಗೋಚರಿಸಿದ್ದಾರೆ.

16 ವರ್ಷದ ತನಿಷಾ ಹೋದ ವರ್ಷ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ನ 16 ವರ್ಷದ ಒಳಗಿನವರ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಇದೇ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲಾ ಕ್ರೀಡಾಕೂಟದ 17 ವರ್ಷದ ಒಳಗಿನವರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. 2018ರಲ್ಲಿ ಮೈಸೂರಿನಲ್ಲಿ ನಡೆದಿದ್ದ ರಾಜ್ಯ ಶಾಲಾ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದರು.

2015–16ರ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ತನಿಷಾ ಸ್ಪರ್ಧಿಸಿದ್ದರು. ಮೊದಲ ಬಾರಿಗೆ 2015ರಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಟೂರ್ನಿಗೆ ಆಯ್ಕೆಯಾಗಿದ್ದರು. ಬಳಿಕ ರಾಜ್ಯಮಟ್ಟದ ಟೂರ್ನಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಗುಜರಾತ್ ರಾಜ್ಯ ಚೆಸ್‌ ಸಂಸ್ಥೆ 2017ರಲ್ಲಿ ಆಯೋಜಿಸಿದ್ದ 15 ವರ್ಷದ ಒಳಗಿನವರ ಬಾಲಕಿಯರ ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತನಿಷಾ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಚೆಸ್‌ನಲ್ಲಿ ಮಾಡಿದ ಹಲವಾರು ಸಾಧನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ‘ಉತ್ತಮ ಕ್ರೀಡಾ ಸಾಧಕಿ’ ಪ್ರಶಸ್ತಿ ನೀಡಿದೆ. ಹೀಗೆ ಹಲವಾರು ಸಾಧನೆಗಳನ್ನು ಮಾಡಿರುವ ಹುಬ್ಬಳ್ಳಿಯ ಹುಡುಗಿ ಸಾಧನೆಗೆ ಈಗ ಹೊಸ ಗರಿ ಮೂಡಿದೆ.

ಇದೇ ವರ್ಷದ ಜೂನ್‌ 30ರಿಂದ ಜುಲೈ 7ರ ತನಕ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. ಈ ಟೂರ್ನಿಯಲ್ಲಿ ಸತತ ಎರಡು ವರ್ಷ ಆಡಿದ್ದು ಹೆಮ್ಮೆಯ ವಿಷಯ. ಅಲ್ಲಿ ಪ್ರಶಸ್ತಿ ಗೆಲ್ಲದಿದ್ದರೂ ಹಲವಾರು ಅಂತರರಾಷ್ಟ್ರೀಯ ಸ್ಪರ್ಧಿಗಳನ್ನು ಎದುರಿಸುವ ಕೌಶಲ ಕಲಿತುಕೊಂಡಿದ್ದಾರೆ. ಒಟ್ಟು ಏಳು ಸುತ್ತುಗಳ ಟೂರ್ನಿಯಲ್ಲಿ 3.5 ಅಂಕಗಳನ್ನು ಕಲೆ ಹಾಕಿದರು. ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಎರಡು ಪಂದ್ಯಗಳನ್ನು ಸೋತಿದ್ದಾರೆ. ಉಳಿದ ಮೂರು ಪಂದ್ಯಗಳು ಡ್ರಾ ಆಗಿವೆ. 16 ವರ್ಷದ ಒಳಗಿನವರ ವಿಭಾಗದಲ್ಲಿ ಒಟ್ಟಾರೆಯಾಗಿ 15ನೇ ಸ್ಥಾನ ಗಳಿಸಿದ್ದಾರೆ.

ಹುಬ್ಬಳ್ಳಿಯ ಚೇತನಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ತನಿಷಾಗೆ ಚೆಸ್‌ನಲ್ಲಿ ಆಸಕ್ತಿ ಬಂದಿದ್ದು ಅನಿರೀಕ್ಷಿತವಾಗಿ. ಹುಬ್ಬಳ್ಳಿ ಜಿಮ್ಖಾನಾ ಕ್ಲಬ್‌ನಲ್ಲಿ ಕೆಲ ವರ್ಷಗಳ ಹಿಂದೆ ಆಯೋಜಿಸಲಾಗಿದ್ದ ಚೆಸ್‌ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದರಿಂದ ಪ್ರೇರಣೆಗೊಂಡು ವೃತ್ತಿಪರ ತರಬೇತಿ ಆರಂಭಿಸಿದರು.

ಗ್ರ್ಯಾಂಡ್‌ ಮಾಸ್ಟರ್‌ ಚೆನ್ನೈನ ಸಿದ್ದಾಂತ್‌, ರೈಲ್ವೆ ರಾಷ್ಟ್ರೀಯ ತಂಡದ ಚೆಸ್‌ ಕೋಚ್‌ ಸುರೇಶ ಕುಮಾರ್ ಮತ್ತು ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಅರವಿಂದ ಶಾಸ್ತ್ರಿ ಅವರ ಬಳಿ ತರಬೇತಿ ಪಡೆದಿದ್ದಾರೆ. 15 ಮತ್ತು 17 ವರ್ಷದ ಒಳಗಿನವರ ವಿಭಾಗದಲ್ಲಿ ಎರಡು ಸಲ ರಾಜ್ಯಮಟ್ಟದ ಟೂರ್ನಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಐದು ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.