ADVERTISEMENT

ಚೆಸ್‌: ಮಗೇಶ್‌ ಮುಡಿಗೆ ಗರಿ

ಪಿಟಿಐ
Published 6 ಜನವರಿ 2020, 14:50 IST
Last Updated 6 ಜನವರಿ 2020, 14:50 IST

ಚೆನ್ನೈ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಪಿ.ಮಗೇಶ್‌ ಚಂದ್ರನ್‌ ಅವರು ಇಂಗ್ಲೆಂಡ್‌ನ ಹಾಸ್ಟಿಂಗ್ಸ್‌ನಲ್ಲಿ ನಡೆದ ಪ್ರತಿಷ್ಠಿತ ಹಾಸ್ಟಿಂಗ್ಸ್‌ ಇಂಟರ್‌ನ್ಯಾಷನಲ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ರಾತ್ರಿ ನಡೆದ ಒಂಬತ್ತನೇ ಸುತ್ತಿನ ಹಣಾಹಣಿಯಲ್ಲಿ 36 ವರ್ಷ ವಯಸ್ಸಿನ ಮಗೇಶ್‌ ಅವರು ಭಾರತದ ಮತ್ತೊಬ್ಬ ಗ್ರ್ಯಾಂಡ್‌ ಮಾಸ್ಟರ್‌ ಜಿ.ಎ.ಸ್ಟಾನಿ ಜೊತೆ ಪಾಯಿಂಟ್ಸ್‌ ಹಂಚಿಕೊಂಡರು. 33 ನಡೆಗಳ ಬಳಿಕ ಉಭಯ ಆಟಗಾರರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಇದರೊಂದಿಗೆ ಒಟ್ಟು 7.5 ಪಾಯಿಂಟ್ಸ್‌ ಕಲೆಹಾಕಿದ ಅವರು ಪ್ರಶಸ್ತಿ ಪಡೆದರು. ಎಂಟನೇ ಸುತ್ತಿನ ಹಣಾಹಣಿಯಲ್ಲಿ ಮಗೇಶ್‌ ಅವರು ಭಾರತದ ದೀಪ್‌ ಸೇನ್‌ಗುಪ್ತಾ ಎದುರು ಗೆದ್ದಿದ್ದರು. ಆರು ಪಂದ್ಯಗಳನ್ನು ಜಯಿಸಿದ್ದ ಮಗೇಶ್‌, ಮೂರರಲ್ಲಿ ಡ್ರಾ ಮಾಡಿಕೊಂಡಿದ್ದರು.

ADVERTISEMENT

ಒಟ್ಟು 6.5 ಪಾಯಿಂಟ್ಸ್‌ ಗಳಿಸಿದ ಕರ್ನಾಟಕದ ಸ್ಟಾನಿ, ಆರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು. ಗ್ರ್ಯಾಂಡ್‌ಮಾಸ್ಟರ್‌ ಆರ್‌.ವೈಶಾಲಿ ಅವರು 10ನೇ ಸ್ಥಾನ ಪಡೆದರು. ಅವರು ಒಂಬತ್ತು ಸುತ್ತುಗಳಿಂದ ಆರು ಪಾಯಿಂಟ್ಸ್‌ ಕಲೆಹಾಕಿದರು.

ದೀಪ್‌ ಸೇನ್‌ಗುಪ್ತಾ ಮತ್ತು ಸ್ವಯಂಶ್‌ ಮಿಶ್ರಾ ಅವರು ಕ್ರಮವಾಗಿ 13 ಮತ್ತು 14ನೇ ಸ್ಥಾನಗಳನ್ನು ಪಡೆದರು. ಇಬ್ಬರೂ ತಲಾ ಆರು ಪಾಯಿಂಟ್ಸ್‌ ಗಳಿಸಿದರು.

ಫ್ರಾನ್ಸ್‌ನ ರುಮೇನ್‌ ಎಡ್ವರ್ಡ್‌ ಅವರು ರನ್ನರ್‌ ಅಪ್ ಆದರು. ಅವರು ಒಟ್ಟು ಏಳು ಪಾಯಿಂಟ್ಸ್‌ ಗಳಿಸಿದರು.

‘ಬಹಳ ದಿನಗಳ ನಂತರ ಪ್ರಶಸ್ತಿ ಗೆದ್ದಿದ್ದೇನೆ. ಹೀಗಾಗಿ ಅತೀವ ಖುಷಿಯಾಗಿದೆ. ಟೂರ್ನಿಯಲ್ಲಿ ಪ್ರಮುಖ ಆಟಗಾರರಾದ ದೀಪ್‌ ಸೇನ್‌ಗುಪ್ತಾ ಮತ್ತು ಡೇವಿಡ್‌ ಹೋವೆಲ್‌ ಅವರನ್ನು ಮಣಿಸಿದ್ದರಿಂದ ಸಂತಸ ಇಮ್ಮಡಿಸಿದೆ’ ಎಂದು ತಮಿಳುನಾಡಿನ ಮಗೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.