ADVERTISEMENT

ಬ್ಯಾಡ್ಮಿಂಟನ್: ಇಂಡೊನೇಷ್ಯಾಕ್ಕೆ ಫೈನಲ್‌ನಲ್ಲಿ ನಿರಾಸೆ

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:48 IST
Last Updated 5 ಮೇ 2024, 15:48 IST
ಥಾಮಸ್ ಕಪ್‌ ಗೆದ್ದುಕೊಂಡ ಚೀನಾ ಆಟಗಾರರ ಸಂಭ್ರಮ...
ಎಎಫ್‌ಪಿ ಚಿತ್ರ
ಥಾಮಸ್ ಕಪ್‌ ಗೆದ್ದುಕೊಂಡ ಚೀನಾ ಆಟಗಾರರ ಸಂಭ್ರಮ... ಎಎಫ್‌ಪಿ ಚಿತ್ರ   

ಚೆಂಗ್ಡು (ಚೀನಾ): ಚೀನಾದ ಪುರುಷರ ಮತ್ತು ಮಹಿಳಾ ತಂಡಗಳು, ಭಾನುವಾರ ನಡೆದ ಫೈನಲ್‌ ಪಂದ್ಯಗಳಲ್ಲಿ ಇಂಡೊನೇಷ್ಯಾ ತಂಡಗಳನ್ನು ಸೋಲಿಸಿ, ಥಾಮಸ್‌ ಮತ್ತು ಉಬರ್ ಕಪ್ ಬ್ಯಾಡ್ಮಿಂಟನ್ ಪ್ರಶಸ್ತಿ  ಗೆದ್ದುಕೊಂಡವು.

ಆತಿಥೇಯ ದೇಶದ ಪುರುಷರ ತಂಡ ಥಾಮಸ್‌ ಕಪ್‌ ಫೈನಲ್‌ನಲ್ಲಿ 3–1 ರಿಂದ ಜಯಗಳಿಸಿತು. 2018ರ ನಂತರ ಇದೇ ಮೊದಲ ಬಾರಿಗೆ ಚೀನಾ ಈ ಪ್ರಶಸ್ತಿ ಗೆದ್ದುಕೊಂಡಿತು. ಆ ವರ್ಷ ಫೈನಲ್‌ನಲ್ಲಿ ಜಪಾನ್‌ ಮೇಲೆ ಜಯಗಳಿಸಿತ್ತು. ಈ ವಿಭಾಗದಲ್ಲಿ ಚೀನಾಕ್ಕೆ ಇದು ಒಟ್ಟಾರೆ 11ನೇ ಪ್ರಶಸ್ತಿ.

ಇಂಡೊನೇಷ್ಯಾಕ್ಕೆ ಸತತ ಎರಡನೇ ಬಾರಿ ಫೈನಲ್‌ನಲ್ಲಿ ನಿರಾಸೆ ಎದುರಾಯಿತು. ಬ್ಯಾಂಕಾಕ್‌ನಲ್ಲಿ ನಡೆದ ಕಳೆದ ಆವೃತ್ತಿಯ ಫೈನಲ್‌ನಲ್ಲಿ ಆ ತಂಡ ಭಾರತಕ್ಕೆ ಮಣಿದಿತ್ತು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಚೀನಾ 3–0 ಯಿಂದ ಇಂಡೊನೇಷ್ಯಾ ಮೇಲೆ ಜಯಗಳಿಸಿ ದಾಖಲೆ 16ನೇ ಬಾರಿ ಉಬರ್ ಕಪ್ ಗೆದ್ದುಕೊಂಡಿತು. ಎರಡು ವರ್ಷಗಳ ಹಿಂದೆ ಥಾಯ್ಲೆಂಡ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ, ಚೀನಾವನ್ನು ಸೋಲಿಸಿತ್ತು.

ಪುರುಷರ ಫೈನಲ್‌:

ವಿಶ್ವದ ಎರಡನೇ ನಂಬರ್ ಆಟಗಾರ ಶಿ ಯುಕಿ 21–17, 21–6 ರಿಂದ ಏಳನೇ ಕ್ರಮಾಂಕದ ಅಂಥೊನಿ ಜಿಂಟಿಂಗ್ ಅವರನ್ನು ಸೋಲಿಸಿ ಚೀನಾಕ್ಕೆ ಮುನ್ನಡೆ ಒದಗಿಸಿದರು. ತೀವ್ರ ಹೋರಾಟ ಕಂಡ ಮೊದಲ ಡಬಲ್ಸ್‌ನಲ್ಲಿ ಲಿಯಾಂಗ್ ವೀಕೆಂಗ್– ವಾಂಗ್‌ ಚಾಂಗ್ ಜೋಡಿ 21–18, 17–21, 21–17 ರಿಂದ ಫಜರ್ ಅಲ್ಫಿಯಾನ್ –ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ಸೋಲಿಸಿ ಚೀನಾ ಮುನ್ನಡೆ ಹೆಚ್ಚಿಸಿತು. ಈ ತುರುಸಿನ ಪಂದ್ಯ 64 ನಿಮಿಷ ನಡೆಯಿತು.

ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಜೊನಾಥನ್ ಕ್ರಿಸ್ಟಿ 21–16, 15–21, 21–17 ರಿಂದ ಆರನೇ ಕ್ರಮಾಂಕದ ಲಿ ಶಿಫೆಂಗ್ ಅವರನ್ನು 1 ಗಂಟೆ 17 ನಿಮಿಷಗಳ ಹೋರಾಟದಲ್ಲಿ ಸೋಲಿಸಿ ಇಂಡೊನೇಷ್ಯಾ ಆಸೆ ಜೀವಂತವಾಗಿಟ್ಟರು.

ಆದರೆ ಮರು (ಎರಡನೇ ಡಬಲ್ಸ್‌) ಪಂದ್ಯದಲ್ಲೇ ಹೆ ಜಿಂಟಿಂಗ್– ರೆನ್‌ ಷಿಯಾಂಗ್ಯು ಜೋಡಿ 21–11, 21–15 ರಿಂದ ಮುಹಮ್ಮದ್ ಶೊಹಿಬುಲ್ ಫಿಕ್ರಿ– ಬಗಾಸ್‌ ಮೌಲಾನಾ ಅವರನ್ನು ಕೇವಲ 37 ನಿಮಿಷಗಳಲ್ಲಿ ಮಣಿಸಿ ಚೀನಾ ಗೆಲುವನ್ನು ಪೂರೈಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.