ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಹಾಕಿ ಟೆಸ್ಟ್ ಸರಣಿಯಲ್ಲಿ ಡ್ರ್ಯಾಗ್-ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ 27 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಅವರು ಭುವನೇಶ್ವರದಲ್ಲಿ ತರಬೇತಿ ಪಡೆಯುತ್ತಿರುವ ಅನುಭವಿ ಆಟಗಾರರ ಜತೆ ಪ್ರವಾಸಕ್ಕೆ ತೆರಳಲು ಬಯಸಿದ್ದಾರೆ.
ಭಾರತ ತಂಡ ಏಪ್ರಿಲ್ 1 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಏಪ್ರಿಲ್ 6 ರಂದು ಮೊದಲ ಪಂದ್ಯವನ್ನು ಆಡಲಿದೆ. ನಂತರ ಏಪ್ರಿಲ್ 7, 10, 12 ಮತ್ತು 13 ರಂದು ಉಳಿದ ನಾಲ್ಕು ಪಂದ್ಯಗಳನ್ನು ಆಡಲಿದೆ. ಎಲ್ಲಾ ಪಂದ್ಯಗಳು ಪರ್ತ್‌ನಲ್ಲಿ ನಡೆಯಲಿವೆ.
ಹಾಕಿ ಆಡುವ ಅತ್ಯುತ್ತಮ ರಾಷ್ಟ್ರಗಳಲ್ಲಿ ಒಂದಾದ ಆಸ್ಟ್ರೇಲಿಯಾ ತಂಡದ ವಿರುದ್ಧದ ಈ ಪ್ರವಾಸ, ಬರುವ ಜುಲೈ– ಆಗಸ್ಟ್‌ನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುಂಚಿತವಾಗಿ ತನ್ನ ಸಿದ್ಧತೆಗೆ ಅಂತಿಮ ಸ್ಪರ್ಶ ನೀಡಲು ಭಾರತಕ್ಕೆ ನೆರವಾಗಲಿದೆ.
ಒಲಿಂಪಿಕ್ಸ್‌ಗೆ 16 ಮಂದಿ ಸಂಭವನೀಯ ಆಟಗಾರರ ಮೇಲೆ ಗಮನ ಇಡಲೂ ಕೋಚ್ ಫುಲ್ಟನ್ ಅವರಿಗೆ ಈ ಪ್ರವಾಸ ಅವಕಾಶ ನೀಡಲಿದೆ. ಇದರ ಜೊತೆಗೆ, ಒಲಿಂಪಿಕ್ಸ್‌ಗೆ ಮುಂಚಿತವಾಗಿ ಪ್ರೊ ಲೀಗ್‌ನ ಬೆಲ್ಜಿಯಂ ಲೆಗ್ ಕೂಡ ನಡೆಯಲಿದ್ದು, ಫುಲ್ಡನ್ ಅವರಿಗೆ ಪೂರ್ಣಪ್ರಮಾಣದ ತಂಡ ಅಂತಿಮಗೊಳಿಸಲು ಹೆಚ್ಚಿನ ಆಯ್ಕೆ ನೀಡಿದೆ.
‘ಈ ಪ್ರವಾಸ ನಮಗೆ ಬಹಳ ಮಹತ್ವದ್ದು. ಒಲಿಂಪಿಕ್ಸ್‌ಗೆ ಮೊದಲು ಪ್ರಸ್ತುತ ನಮ್ಮ ಆಟದ ಮಟ್ಟ ತಿಳಿದುಕೊಳ್ಳಲು, ಜೊತೆಗೆ ಯಾವ ವಿಭಾಗದಲ್ಲಿ ಉತ್ತಮಪಡಿಸಿಕೊಳ್ಳಬೇಕು ಎಂದು ಅರಿಯಲು ನೆರವಾಗಲಿದೆ. ಆಟಗಾರರ ದೃಷ್ಟಿಯಿಂದಲೂ ಇದು ಮಹತ್ವದ ಟೂರ್ನಿ’ ಎಂದು ಹಾಕಿ ಇಂಡಿಯಾ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಂಡ ಇಂತಿದೆ:
ಗೋಲ್ ಕೀಪರ್ಸ್: ಪಿ.ಆರ್.ಶ್ರೀಜೇಶ್, ಕೃಷನ್ ಬಹಾದ್ದೂರ್ ಪಾಠಕ್ ಮತ್ತು ಸೂರಜ್ ಕರ್ಕೇರಾ.
ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗರಾಜ್ ಸಿಂಗ್, ಸಂಜಯ್, ಸುಮಿತ್, ಅಮೀರ್ ಅಲಿ.
ಮಿಡ್ ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಂಷೇರ್ ಸಿಂಗ್, ನೀಲಕಂಠ ಶರ್ಮಾ, ರಾಜ ಕುಮಾರ್ ಪಾಲ್, ವಿಷ್ಣುಕಾಂತ್ ಸಿಂಗ್ .
ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ದಿಲ್‌ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಗುರ್ಜಂತ್ ಸಿಂಗ್, ಮೊಹಮ್ಮದ್ ರಹೀಲ್ ಮೌಸೀನ್, ಬಾಬಿ ಸಿಂಗ್ ಧಾಮಿ, ಅರಿಜಿತ್ ಸಿಂಗ್ ಹುಂಡಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.