ADVERTISEMENT

ಸೈಕ್ಲಿಂಗ್‌ ವೃತ್ತಿಯಾದ ಬಗೆ...

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 19:46 IST
Last Updated 18 ನವೆಂಬರ್ 2018, 19:46 IST
ಕಿರಣ್‌ ಕುಮಾರ್‌ ರಾಜು
ಕಿರಣ್‌ ಕುಮಾರ್‌ ರಾಜು   

* ನಿಮ್ಮ ಸೈಕ್ಲಿಂಗ್‌ ‘ಯಾತ್ರೆ’ ಆರಂಭವಾದ್ದದ್ದು ಹೇಗೆ, ಯಾವಾಗ?

ಮೊದಲಿನಿಂದಲೂ ಸೈಕಲ್‌ ಓಡಿಸು ವುದು ಎಂದರೆ ನನಗೆ ತುಂಬಾ ಇಷ್ಟ. ನನ್ನ ಕಚೇರಿಯು ಮನೆಯಿಂದ 20 ಕಿ.ಮೀ ದೂರದಲ್ಲಿತ್ತು. ಪ್ರತಿದಿನ ಬಸ್‌ನಲ್ಲಿ ಪಯಣಿಸುತ್ತಿದ್ದ ನನಗೆ ಬೆಂಗಳೂರಿನ ಟ್ರಾಫಿಕ್‌ ಬೇಸರ ತರಿಸಿತ್ತು. ಹಾಗಾಗಿ 2011ರಲ್ಲಿ ಸೈಕಲ್‌ನಲ್ಲಿ ಓಡಾಡಲು ನಿರ್ಧರಿಸಿದೆ. ಸೈಕಲ್‌ ಜೊತೆ ನಂಟು ಬೆಳೆದ ನಂತರ ಏನನ್ನಾದರೂ ಸಾಧಿಸಬೇಕು ಎಂಬ ಛಲ ಬಂತು.

ಹೀಗಾಗಿ ಸೈಕ್ಲಿಂಗ್‌ ಅನ್ನು ಪ್ರವೃತ್ತಿಯಾಗಿಸಿಕೊಂಡೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೇಸ್‌ಗಳಲ್ಲಿ ಭಾಗವಹಿಸಲು ಸ್ನೇಹಿತರು ಪ್ರೋತ್ಸಾಹಿಸಿದರು. 2016ರಲ್ಲಿ ನಡೆದ ಬೆಂಗಳೂರು ಬೈಸಿಕಲ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡೆ. ನಾನು ಭಾಗವಹಿಸಿದ ಮೊದಲ ರೇಸ್‌ನಲ್ಲಿಯೇ ಮೂರನೇ ಸ್ಥಾನ ಗಳಿಸಿದೆ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ADVERTISEMENT

* ಸೈಕ್ಲಿಂಗ್‌ ನಂತರ ನಿಮ್ಮ ವೃತ್ತಿ ಜೀವನ ಬದಲಾದದ್ದು ಹೇಗೆ?

ವೃತ್ತಿಯಲ್ಲಿ ನಾನು ಸಿವಿಲ್‌ ಎಂಜಿನಿಯರ್‌. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸದಲ್ಲಿ ಬಡ್ತಿ ಆದ ನಂತರ ಕೆಲಸದ ಒತ್ತಡ, ಜವಾಬ್ದಾರಿ ಹೆಚ್ಚಾಯಿತು. ಮೊದಲಿನ ಹಾಗೆ ಸೈಕಲ್‌ ಬಳಸಲು ಆಗುತ್ತಿರಲಿಲ್ಲ. ಆದರೆ ಸೈಕ್ಲಿಂಗ್‌ ಇಲ್ಲದೇ ನಾನು ಉತ್ಸಾಹದಿಂದ ಇರಲು ಆಗುತ್ತಿರಲಿಲ್ಲ. ಪತ್ನಿ ಹಾಗೂ ಸ್ನೇಹಿತರು ಸೈಕ್ಲಿಂಗ್‌ ಅನ್ನೇ ವೃತ್ತಿಯಾಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಮೊದಮೊದಲು ಅಪ್ಪ, ಅಮ್ಮ ನನ್ನ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ತರುವಾಯ ಅವರು ನನ್ನ ಕನಸನ್ನು ಬೆಂಬಲಿಸತೊಡಗಿದರು.‌ ಇಲ್ಲಿಯವರೆಗೂ 130ಕ್ಕೂ ಅಧಿಕ ರೇಸ್‌ಗಳಲ್ಲಿ ಭಾಗವಹಿಸಿದ್ದೇನೆ. 40 ರೇಸ್‌ಗಳಲ್ಲಿ ಚಿನ್ನದ ಪದಕ ಗೆದ್ದಿದ್ದೇನೆ. 2018ರ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ್ದೇನೆ.

* ನಿಮ್ಮ ಸಾಧನೆಗೆ ಸ್ಫೂರ್ತಿ ತುಂಬಿದವರು ಯಾರು?

ಸ್ವಿಟ್ಜರ್‌ಲೆಂಡ್‌ನ ಸೈಕ್ಲಿಸ್ಟ್‌ನಿನೊ ಸ್ಚರ್ಟರ್‌ ಎಂದರೆ ನನಗೆ ಇಷ್ಟ. ಅವರೇ ನನ್ನ ಸ್ಫೂರ್ತಿ. ನನಗೆ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ತುಂಬಾ ಇಷ್ಟ. ಇದು ತುಂಬಾ ಕಷ್ಟಕರ ರೇಸ್‌. ಗುಡ್ಡಗಾಡಿನ ಕಾಲು ದಾರಿಯಲ್ಲಿ ಈ ರೇಸ್‌ ನಡೆಯುತ್ತದೆ.

* ಸೈಕ್ಲಿಂಗ್‌ಗೆ ಬೇಕಾದ ಸೌಲಭ್ಯಗಳೇನು?

ಸರ್ಕಾರವು ಸೈಕ್ಲಿಂಗ್‌ನಲ್ಲಿ ತೊಡಗಿರು ವವರಿಗೆ ಪ್ರೋತ್ಸಾಹ ನೀಡಬೇಕು. ತರಬೇತಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಸೈಕ್ಲಿಂಗ್‌ ಮಾಡಲು ಅನುಮತಿ ನೀಡಬೇಕು.

* ನಿಮ್ಮ ಸೈಕ್ಲಿಂಗ್‌ ತರಬೇತಿ ಹೇಗೆ ನಡೆಯುತ್ತದೆ?

ಪ್ರತಿದಿನ 4–5 ತಾಸು ಸೈಕ್ಲಿಂಗ್‌ ಮಾಡುತ್ತೇನೆ. ಇತ್ತೀಚೆಗಷ್ಟೆಆಸ್ಟ್ರೇಲಿಯಾದಲ್ಲಿ ಒಂದುವರೆ ತಿಂಗಳು ಸೈಕ್ಲಿಂಗ್‌ ತರಬೇತಿ ಪಡೆದಿದ್ದೇನೆ.

* ಮುಂದಿನ ಗುರಿ ಏನು?

ಮುಂಬರುವ 2020ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಾಂಪಿಯನ್‌ ಆಗಬೇಕೆಂಬ ಗುರಿ ಇದೆ. ಅದಕ್ಕಾಗಿ ಈ ಎರಡು ವರ್ಷ ಮೀಸಲಿಟ್ಟು ತಯಾರಿ ನಡೆಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.